ರೈತರು ಸತ್ತ ಮೇಲೆ ಸರಕಾರ ಪರಿಹಾರ ಕೊಡುತ್ತಾ: ಈಶ್ವರ್ ಖಂಡ್ರೆ ಪ್ರಶ್ನೆ

Update: 2020-10-18 16:02 GMT

ಬೆಂಗಳೂರು, ಅ. 18: ಪ್ರವಾಹಕ್ಕೆ ಸಿಲುಕಿ ಸಂಕಷ್ಟಕ್ಕೆ ಒಳಗಾದವರಿಗೆ ಇಲ್ಲಿಯವರೆಗೆ ಸ್ಪಂದನ ಇಲ್ಲ. ರೈತರು ಸತ್ತ ಮೇಲೆ ಪರಿಹಾರ ಕೊಡುತ್ತಾರಾ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಪ್ಪ ಚರ್ಮದ, ಕಿವಿ, ಕಣ್ಣು, ಹೃದಯ ಇಲ್ಲದ ಸರಕಾರ ಇದು. ಇಲ್ಲಿಯವರೆಗೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ. ಇದರಲ್ಲೂ ರಾಜಕೀಯ ಮಾಡೋದು ಬಿಡಿ. ಎಲ್ಲರೂ ಉಪ ಚುನಾವಣಾ ಪ್ರಚಾರದಲ್ಲಿದ್ದಾರೆ. ಈ ವಿಷಯದಲ್ಲಿ ಬಿಜೆಪಿ ನಾಟಕ ಮಾಡುತ್ತಿದೆ. ಪ್ರತಿ ಎಕರೆಗೆ 50 ಸಾವಿರ ರೂ. ವಿಶೇಷ ಪ್ಯಾಕೇಜ್ ಕೊಡಬೇಕು ಎಂದು ಆಗ್ರಹಿಸಿದರು.

ಪ್ರವಾಹ ಪೀಡಿತ ಪ್ರದೇಶದಲ್ಲಿ ಅ.21 ರಂದು ಸಿಎಂ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಕಲಬುರಗಿ, ವಿಜಯಪುರ, ರಾಯಚೂರು, ಯಾದಗಿರಿಯಲ್ಲಿ ಮಾತ್ರ ವೈಮಾನಿಕ ಸಮೀಕ್ಷೆ ನಡೆಸಲಾಗುತ್ತಿದೆ. ವೈಮಾನಿಕ ಸಮೀಕ್ಷೆ ಪಟ್ಟಿಯಲ್ಲಿ ಬೀದರ್ ಜಿಲ್ಲೆ ಯಾಕೆ ಇಲ್ಲ? ಸಿಎಂ ಬೀದರ್ ಜಿಲ್ಲೆಗೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ಮಾಡಿ, ಜೊತೆಗೆ ಪ್ರಗತಿ ಪರಿಶೀಲನೆ ಮಾಡಿ, ಪರಿಹಾರ ಘೋಷಿಸಿ ಎಂದು ಅವರು ಒತ್ತಾಯಿಸಿದರು.

ಬೀದರ್ ಜಿಲ್ಲೆಯಲ್ಲಿ 2.47 ಸಾವಿರ ರೂ. ಬೆಳೆ ಹಾನಿ ಸಂಭವಿಸಿದೆ. ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಭೀಕರ ಅತಿವೃಷ್ಟಿಯಾಗಿದೆ. ಇಷ್ಟಾದರೂ ಸರಕಾರ ರಾಜಕೀಯ ಮಾಡುತ್ತಿದೆ. ಪ್ರವಾಹ ಸಂತ್ರಸ್ತರ ರಕ್ಷಣೆಗೆ ಬರುತ್ತಿಲ್ಲ. ಜನ ಮನೆ ಕಳೆದುಕೊಂಡು ಬೀದಿಯಲ್ಲಿ ನಿಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News