ಪ್ರತಿಷ್ಠಿತ ಸಾರಿಗೆಗಳಲ್ಲಿ ಶೇ.10ರಷ್ಟು ಹೆಚ್ಚಿಸಿ ವಿಧಿಸಿದ್ದ ಪ್ರಯಾಣ ದರ ಹಿಂಪಡೆದ ಕೆಎಸ್ಆರ್‌ಟಿಸಿ

Update: 2020-10-18 16:49 GMT

ಬೆಂಗಳೂರು, ಅ.18: ಕೆಎಸ್ಸಾರ್ಟಿಸಿ ನಿಗಮದ ಬಸ್‍ಗಳ ಕಡೆಗೆ ಪ್ರಯಾಣಿಕರನ್ನು ಆಕರ್ಷಿಸುವ ದೃಷ್ಟಿಯಿಂದ ಪ್ರತಿಷ್ಠಿತ ಸಾರಿಗೆಗಳಲ್ಲಿ ವಾರಾಂತ್ಯ ದಿನಗಳಂದು ಶೇ.10ರಷ್ಟು ಪ್ರಯಾಣದರವನ್ನು ಹೆಚ್ಚಿಸಿ ವಿಧಿಸುತ್ತಿರುವುದನ್ನು ಅ.16ರಿಂದ ಜಾರಿಗೆ ಬರುವಂತೆ 2020ರ ಡಿಸೆಂಬರ್ 31ರವರೆಗೆ ಹಿಂಪಡೆಯಲಾಗಿದೆ ಎಂದು ಕೆಎಸ್ಸಾರ್ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ಸುತ್ತೋಲೆ ಹೊರಡಿಸಿದ್ದಾರೆ.

ಕೊರೋನ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಿಗಮದ ವತಿಯಿಂದ ಕಾರ್ಯಾಚರಣೆ ಮಾಡುತ್ತಿರುವ ಹವಾನಿಯಂತ್ರಿತ ಸಾರಿಗೆಗಳಲ್ಲಿ ಪ್ರಯಾಣಿಸಲು ಸಾರ್ವಜನಿಕ ಪ್ರಯಾಣಿಕರು ಆಸಕ್ತಿ ತೋರುತ್ತಿಲ್ಲ. ಆಂಧ್ರಪ್ರದೇಶ, ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಾರಿಗೆಗಳಲ್ಲಿ ವಾರಾಂತ್ಯ ದಿನಗಳಂದು ಶೇ.10ರಷ್ಟು ಹೆಚ್ಚುವರಿ ಪ್ರಯಾಣ ದರ ವಿಧಿಸಿಲ್ಲ. ಪ್ರತಿಷ್ಠಿತ ಸಾರಿಗೆಗಳಲ್ಲಿ ಪ್ರಯಾಣದರ ನಿಗಮದ ಸಾರಿಗೆಗಳಲ್ಲಿ ನಿಗದಿಪಡಿಸಿರುವ ಪ್ರಯಾಣ ದರಗಳಿಗಿಂತ ಕಡಿಮೆಯಿದೆ. ಹೀಗಾಗಿ, ಶೇ.10ರಷ್ಟು ಹೆಚ್ಚಿಸಿ ವಿಧಿಸಿರುವ ಪ್ರಯಾಣ ದರವನ್ನು ಹಿಂಪಡೆಯಲಾಗಿದೆ. 

ಪ್ರತಿ ಶುಕ್ರವಾರ ಗಮ್ಯ ಸ್ಥಳಕ್ಕೆ ಹೊರಡುವ ಮತ್ತು ಗಮ್ಯ ಸ್ಥಳಗಳಿಂದ ಪ್ರತಿ ರವಿವಾರಗಳಂದು ನಿರ್ಗಮಿಸುವ ಸಾರಿಗೆಗಳಲ್ಲಿ ಮೂಲ ಪ್ರಯಾಣ ದರವನ್ನು ಶೇ.10ರಷ್ಟು ಹೆಚ್ಚಿಸಲಾಗಿತ್ತು. ಆದರೆ, ಈಗ ಅ.16ರಿಂದ ಡಿ.31ರವರೆಗೆ ಶೇ.10ರಷ್ಟು ಹೆಚ್ಚಿಸಿರುವ ಪ್ರಯಾಣ ದರವನ್ನು ಹಿಂಪಡೆಯಲಾಗಿದೆ. ಸದರಿ ಅವಧಿಯಲ್ಲಿ ವಾರದ ಎಲ್ಲ ದಿನಗಳಂದು ಅನುಮೋದಿತ ಏಕರೂಪದ ಪ್ರಯಾಣ ದರಗಳನ್ನು ಆಕರಿಸಿ ಸಾರಿಗೆಗಳಲ್ಲಿ ಕಾರ್ಯಾಚರಿಸಲು ಕ್ರಮ ಕೈಗೊಳ್ಳಲು ಕೋರಲಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News