ಚಿಂತಕ, ದಲಿತಪರ ಹೋರಾಟಗಾರ ರಾಜರತ್ನಂ ನಿಧನ
ಚಿಕ್ಕಮಗಳೂರು, ಅ.18: ಜಿಲ್ಲೆಯ ಹೆಸರಾಂತ ದಲಿತ ಹೋರಾಟಗಾರ, ಪ್ರಗತಿಪರ ಚಿಂತಕ, ನಿವೃತ್ತ ಶಿಕ್ಷಕ ಕೂದುವಳ್ಳಿ ಗ್ರಾಮದ ಕೆ.ಪಿ.ರಾಜರತ್ನಂ(70) ರವಿವಾರ ಸಂಜೆ ನಿಧನರಾಗಿದ್ದಾರೆ.
ಕಳೆದ 15 ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಕುಟುಂಬಸ್ಥರು ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಸಂಜೆ 5ರ ಹೊರ ಹೊತ್ತಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ವೃತ್ತಿಯಿಂದ ಶಿಕ್ಷಕರಾಗಿದ್ದ ಅವರು, ಜಿಲ್ಲೆಯ ವಿವಿಧೆಡೆ ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ತೋಟಗಾರಿಕಾ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಇದೇ ವೇಳೆ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾಗಿ ಜಿಲ್ಲೆಯಲ್ಲಿ ಸುಮಾರು 30 ವರ್ಷಗಳಿಂದ ದಲಿತ, ರೈತ, ಪ್ರಗತಿಪರ ಹೋರಾಟಗಳಲ್ಲಿ ತೊಡಗಿಸಿಕೊಂಡು ತುಳಿತಕ್ಕೊಳಗಾದವರು, ರೈತರು, ಕಾರ್ಮಿಕರು, ದಲಿತರ ಹಕ್ಕುಗಳಿಗಾಗಿ ಅನೇಕ ಹೋರಾಟಗಳನ್ನು ನಡೆಸಿದ್ದಾರೆ.
ನಿವೃತ್ತಿಯ ಬಳಿಕವೂ ಅವರು ದಲಿತ ಪರ ಹೋರಾಟಗಳಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು, ಜಿಲ್ಲಾದ್ಯಂತ ಮನೆಮಾತಾಗಿದ್ದ ಅವರು ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಮಗಳನ್ನು ಅಗಲಿದ್ದಾರೆ. ರಾಜರತ್ನಂ ನಿಧನಕ್ಕೆ ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ದಲಿತ, ಕಾರ್ಮಿಕ, ರೈತ, ಪ್ರಗತಿಪರ ಸಂಘಟನೆಗಳ ಮುಖಂಡರು ತೀವ್ರ ಸಂತಾಪ ಸೂಚಿಸಿದ್ದಾರೆ.
ಮೃತ ಅಂತ್ಯಕ್ರಿಯೆ ಅ.19ರಂದು ಹುಟ್ಟೂರು ಕೂದುವಳ್ಳಿ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.