ಸಾರ್ವಜನಿಕ ಬದುಕಿನಲ್ಲಿರುವವರ ಸಂಕಷ್ಟಗಳು ಯಾವತ್ತಿಗೂ ಅನಾಥ: ಡಿಸಿಎಂ ಗೋವಿಂದ ಕಾರಜೋಳ

Update: 2020-10-18 17:09 GMT

ಬೆಂಗಳೂರು, ಅ. 18: ಸಾರ್ವಜನಿಕ ಬದುಕಿನಲ್ಲಿರುವವರ ವೈಯಕ್ತಿಕ ಸಂತಸ-ಸಂಕಟಗಳು ಸಾರ್ವಜನಿಕರಿಗೆ ಅಷ್ಟಾಗಿ ತಿಳಿದಿರುವುದಿಲ್ಲ. ಸಂತಸಗಳು ಕೆಲವೊಮ್ಮೆ ಹೊರಗೆ ಬರುತ್ತವೆ. ಆದರೆ ಸಂಕಷ್ಟಗಳು ಯಾವತ್ತಿಗೂ ಅನಾಥ. ಅದನ್ನು ಅನುಭವಿಸಿದರಿಗಷ್ಟೇ ಅದರ ಪ್ರಖರತೆ ಗೊತ್ತು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಕೋವಿಡ್‍ನಿಂದಾಗಿ ಪ್ರವಾಹ ಪೀಡಿತ ಪ್ರದೇಶಗಳಿಗೆ ತಾನು ಭೇಟಿ ನೀಡಲು ಸಾಧ್ಯವಾಗದೆ ಇರುವ ಬಗ್ಗೆ ಕೇಳಿ ಬರುತ್ತಿರುವ ಟೀಕೆ, ಆಕ್ಷೇಪಗಳ ಕುರಿತು ಪ್ರತಿಕ್ರಿಯಿಸಿರುವ ಗೋವಿಂದ ಕಾರಜೋಳ, ಇದರ ಪರಿಣಾಮವಾಗಿ ಸಾರ್ವಜನಿಕ ಬದುಕಿನಲ್ಲಿರುವವರ ಹಾಜರಿ ಅಥವಾ ಗೈರುಹಾಜರಿಗಳನ್ನು ಕನ್ನಡಕ ಹಾಕಿ ನೋಡುವ ಪ್ರವೃತ್ತಿ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಲಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನ್ನ ಪುತ್ರ ಡಾ.ಗೋಪಾಲ ಕಾರಜೋಳ 23 ದಿನಗಳಿಂದ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನನ್ನ ಧರ್ಮಪತ್ನಿ ಕೊರೋನ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಆಸ್ಪತ್ರೆಯಿಂದ ಹಿಂದಿರುಗಿದ್ದಾರೆ. ನಾನೂ ಕೋವಿಡ್ 19 ಸೋಂಕಿಗೆ ಒಳಗಾಗಿ ಗುಣಮುಖನಾಗಿ ಹಿಂದಿರುಗಿದ್ದೇನೆ. ನಮ್ಮ ಕುಟುಂಬದಲ್ಲಿ ಒಟ್ಟಾರೆ 8 ಮಂದಿ ಕೊರೋನ ಸೋಂಕಿನಿಂದ ಒಳಗಾಗಿದ್ದೇವೆ. ಇದು ವಸ್ತುಸ್ಥಿತಿ ಎಂದು ಅವರು ನುಡಿದಿದ್ದಾರೆ.

ಇಂತಹ ಗತ್ಯಂತರ ಸಂದರ್ಭದಲ್ಲಿ ನಾನು ಎಲ್ಲೂ ಹೊರಗಡೆ ಹೋಗುವುದು ಸೂಕ್ತವಲ್ಲ. ಅನಿವಾರ್ಯವಿದ್ದ ಪ್ರಸಂಗದಲ್ಲಿ ಮಾತ್ರ ಮುನ್ನೆಚ್ಚರಿಕೆಯಿಂದ ಆಯಾಸವಾಗದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ವೈದ್ಯರ ಸಲಹೆ ಇದೆ. ದೂರದ ಪ್ರಯಾಣ ನಿಷಿದ್ಧ ಎಂಬುದು ವೈದ್ಯರು ಕೊಟ್ಟಿರುವ ಎಚ್ಚರಿಕೆ. ಈ ಎಲ್ಲ ಅಂಶಗಳು ಮುಖ್ಯಮಂತ್ರಿ ಯಡಿಯೂರಪ್ಪನವರ ಗಮನದಲ್ಲಿದೆ. ಅವರೂ ಕೂಡ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಸೂಚಿಸಿದ್ದಾರೆ ಎಂದು ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಮಾಧ್ಯಮಗಳ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ ಪ್ರವಾಹ ಪೀಡಿತ ಜಿಲ್ಲೆಗಳಾದ ಕಲಬುರಗಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಸಂತ್ರಸ್ತರ ಪರಿಹಾರಕ್ಕೆ ಕೈಗೊಳ್ಳಬೇಕಾದ ಮಾರ್ಗೋಪಾಯಗಳನ್ನು ಜಿಲ್ಲಾಡಳಿತಕ್ಕೆ ಖಚಿತವಾಗಿ ನಿರ್ದೇಶಿಸಿದ್ದೇನೆ. ಅದರ ಸತತ ಉಸ್ತುವಾರಿಯಲ್ಲಿ ಇದ್ದೇನೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಪರಿಸ್ಥಿತಿಯ ಅನಿವಾರ್ಯತೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ನಾನು ಭೇಟಿ ನೀಡಿಲ್ಲದಿರಬಹುದು ಆದರೆ ಜವಾಬ್ದಾರಿಯಿಂದ ಉಪಮುಖ್ಯಮಂತ್ರಿಯಾಗಿ, ಜಿಲ್ಲಾ ಉಸ್ತುವಾರಿ ಸಚಿವನಾಗಿ ನೊಂದವರ ಪರಿಹಾರಕ್ಕೆ ಶ್ರಮಿಸುತ್ತಿದ್ದೇನೆ ಎಂದು ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಮಾತುಗಳಿಂದ ಇಲ್ಲವೇ ಘೋಷಣೆಗಳಿಂದ ಅಥವಾ ಟೀಕೆ ಟಿಪ್ಪಣಿಗಳಿಂದ ಸಂತ್ರಸ್ತರ ಪರಿಹಾರ ಕಾರ್ಯ ಆಗಲಾರದು. ಅದಕ್ಕೆ ಬೇಕಾದುದು ಸರಕಾರದ ದೃಢ ಸಂಕಲ್ಪ. ಈ ನಿಟ್ಟಿನಲ್ಲಿ ಯಾವುದೇ ರೀತಿಯ ಟೀಕೆ ಟಿಪ್ಪಣಿಗಳಿಗೆ ಮಾರು ಹೋಗದೇ ಸರಕಾರದ ವಿಶ್ವಾಸಾರ್ಹ ಕ್ರಮಗಳನ್ನು ಗಮನಿಸಬೇಕೆಂದು ನಾನು ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಯುಗಾದಿಯಿಂದ ಆರಂಭವಾದ ಈ ಕೊರೋನ ವೈರಾಣು ನಿವಾರಣೆ ಹಾಗೂ ನೊಂದವರ ಕಲ್ಯಾಣಕ್ಕೆ ನಾನು ಕೈಗೊಂಡಿರುವ ಕಾರ್ಯ, ಪರಿಹಾರ ಕ್ರಮಗಳು ಎಲ್ಲರಿಗೂ ಗೊತ್ತಿರುವ ಸಂಗತಿ. ಕಲಬುರಗಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ್ದನ್ನು ಸ್ಮರಿಸಬೇಕು. 2009ರ ಅತಿವೃಷ್ಟಿ ಸಂದರ್ಭದ ಪರಿಸ್ಥಿತಿಯಲ್ಲಿ ಕೊಪ್ಪಳ, ಬಾಗಲಕೋಟೆ, ವಿಜಯಪುರ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಸಂತ್ರಸ್ತರ ರಕ್ಷಣಾ ಕಾರ್ಯ, ಪರಿಹಾರಕಾರ್ಯಗಳನ್ನು ಕೈಗೊಂಡಿರುವ ಕ್ರಮದ ಬಗ್ಗೆ ತಮ್ಮೆಲ್ಲರಿಗೂ ತಿಳಿದ ಸಂಗತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ವರ್ತಮಾನದ ಒಂದು ಘಟನೆಯಿಂದಷ್ಟೇ ವ್ಯಕ್ತಿಯನ್ನು ಅಳೆಯಲು ಹೋಗಬಾರದು. ಹಿಂದಿನ ವಿದ್ಯಾಮಾನಗಳು ಈಗಿನ ಸ್ಥಿತಿಯನ್ನು ಗುರುತಿಸಲು ಯಾವತ್ತಿಗೂ ನಿರ್ಣಾಯಕ ಎಂಬುದು ನನ್ನ ತಿಳುವಳಿಕೆ. ಈ ಸಂದರ್ಭದಲ್ಲಿ ಪರಂಪರೆಯ ಬೆಳಕಿನಲ್ಲಿ ವರ್ತಮಾನದ ಕತ್ತಲನ್ನು ಓಡಿಸಿ ಭವಿಷ್ಯಕ್ಕೆ ಬೆಳಕನ್ನು ತರುವ ಕಡೆ ಸರಕಾರದ ಆಡಳಿತ ಯಂತ್ರವನ್ನು ಬಳಸಿಕೊಂಡು ಮುನ್ನಡೆಯುವುದು ನಾನು ತೊಟ್ಟಿರುವ ಧೀಕ್ಷೆ. ಇದಕ್ಕೆ ಇಡೀ ಕರ್ನಾಟಕದ ಜನತೆಯ ಆರೈಕೆ, ಹಾರೈಕೆ ಅಗತ್ಯ ಎಂದು ಗೋವಿಂದ ಕಾರಜೋಳ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News