ಕೆಲ ಜಿಲ್ಲೆಗಳಲ್ಲಿ ಕೋವಿಡ್-19 ಸಮುದಾಯ ಹರಡುವಿಕೆ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್

Update: 2020-10-19 03:58 GMT

ಹೊಸದಿಲ್ಲಿ, ಅ.19: ದೇಶದ ಕೆಲ ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ಮಾರಕ ಕೋವಿಡ್-19 ಸೋಂಕಿನ ಸಮುದಾಯ ಹರಡುವಿಕೆ ಕಂಡುಬಂದಿದೆ. ಆದರೆ ದೇಶಾದ್ಯಂತ ಇದು ಸಂಭವಿಸಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

ಅಧಿಕ ಜನದಟ್ಟಣೆ ಇರುವ ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋವಿಡ್-19 ಸಮುದಾಯ ಹರಡುವಿಕೆ ನಿರೀಕ್ಷಿಸಲಾಗಿದೆ. ಆದಾಗ್ಯೂ ದೇಶಾದ್ಯಂತ ಸಮುದಾಯ ಹರಡುವಿಕೆ ಸಂಭವಿಸದು. ಸಮುದಾಯ ಹರಡುವಿಕೆ ಸೀಮಿತ ರಾಜ್ಯಗಳ ನಿರ್ದಿಷ್ಟ ಜಿಲ್ಲೆಗಳಿಗೆ ಸೀಮಿತ ಎಂದು ’ಸಂಡೇ ಸಂವಾದ’ ಸಾಮಾಜಿಕ ಜಾಲತಾಣ ಸಂವಾದದಲ್ಲಿ ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ತಮ್ಮ ರಾಜ್ಯದಲ್ಲಿ ಸಮುದಾಯ ಹರಡುವಿಕೆಯ ನಿದರ್ಶನಗಳು ಪತ್ತೆಯಾಗಿವೆ ಎಂದು ಹೇಳಿಕೆ ನೀಡಿದ್ದರು. ಈ ವೈರಸ್‌ನಿಂದ ಹರಡುವ ಕಾಯಿಲೆ ಯಾವ ರಾಜ್ಯದಲ್ಲಿ ಸಮುದಾಯ ಹರಡುವಿಕೆ ಆಗುತ್ತಿದೆ ಎಂದು ಸಂವಾದದಲ್ಲಿ ಪಾಲ್ಗೊಂಡ ವ್ಯಕ್ತಿಯೊಬ್ಬರು ಪ್ರಶ್ನಿಸಿದಾಗ ಸಚಿವರು ಮೇಲಿನಂತೆ ಉತ್ತರಿಸಿದರು.

ಕಂಟೈನ್‌ಮೆಂಟ್ ಕಾರ್ಯತಂತ್ರಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಇದನ್ನು ಆಯಾ ಪ್ರದೇಶಕ್ಕೇ ಸೀಮಿತಗೊಳಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

ಶನಿವಾರ ದೇಶಾದ್ಯಂತ ಪತ್ತೆಯಾದ 61,871 ಪ್ರಕರಣಗಳ ಪೈಕಿ ಶೇಕಡ 79ರಷ್ಟು ಪ್ರಕರಣಗಳು 10 ರಾಜ್ಯಗಳಿಂದ ವರದಿಯಾಗಿವೆ. ಅಂತೆಯೇ ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 8 ಲಕ್ಷಕ್ಕಿಂತ ಕೆಳಗೆ ಇಳಿದಿದ್ದು, ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ತಲಾ 50 ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News