ದೇಶದ ಐದು ಪ್ರಮುಖ ಪರಿಸರ ಸಂಬಂಧಿತ ಸಂಸ್ಥೆಗಳಿಗೆ ಅನುದಾನ ಕಡಿತಕ್ಕೆ ಕೇಂದ್ರ ಚಿಂತನೆ

Update: 2020-10-19 12:35 GMT

ಹೊಸದಿಲ್ಲಿ: ಪ್ರಸಕ್ತ ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧೀನದಲ್ಲಿ ಕಾರ್ಯಾಚರಿಸುವ ದೇಶದ ಐದು ಪ್ರಮುಖ ಪರಿಸರ-ವನ್ಯಜೀವಿ ಮತ್ತು ಅರಣ್ಯಕ್ಕೆ ಸಂಬಂಧಿಸಿದ  ಸಂಸ್ಥೆಗಳ ಕಾರ್ಯನಿರ್ವಹಣೆ ಹಾಗೂ ಅವುಗಳ ವಿತ್ತೀಯ ಅಗತ್ಯತೆಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಕೇಂದ್ರ ಸರಕಾರ ಹಂತಹಂತವಾಗಿ ಕೈಬಿಡಲಿದೆ ಎಂದು thewire.in ವರದಿ ಮಾಡಿದೆ.

ವಿತ್ತ ಸಚಿವಾಲಯದ ಅಧೀನದಲ್ಲಿರುವ ಖರ್ಚು-ವೆಚ್ಚಗಳ ಸಚಿವಾಲಯದ ಈ ಪ್ರಸ್ತಾವನೆಯು ವೈಲ್ಡ್ ಲೈಫ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ, ಡೆಹ್ರಾಡೂನ್, ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಫಾರೆಸ್ಟ್ ಮ್ಯಾನೇಜ್ಮೆಂಟ್, ಭೋಪಾಲ್, ಇಂಡಿಯನ್ ಪ್ಲೈವುಡ್ ಇಂಡಸ್ಟ್ರೀಸ್ ರಿಸರ್ಚ್ ಆ್ಯಂಡ್ ಟ್ರೈನಿಂಗ್ ಇನ್‍ಸ್ಟಿಟ್ಯೂಟ್, ಬೆಂಗಳೂರು, ಸಿಪಿಆರ್ ಎನ್ವಿರಾನ್ಮೆಂಟಲ್ ಎಜುಕೇಶನ್ ಸೆಂಟರ್ ಚೆನ್ನೈ ಹಾಗೂ ಸೆಂಟರ್ ಫಾರ್ ಎನ್ವಿರಾನ್ಮೆಂಟ್ ಎಜುಕೇಶನ್, ಅಹ್ಮದಾಬಾದ್ ಇವುಗಳನ್ನು ಬಾಧಿಸಲಿದೆ.

ಕೇಂದ್ರ ಸರಕಾರದ ``ಕನಿಷ್ಠ ಸರಕಾರ, ಗರಿಷ್ಠ ಆಡಳಿತ' ನೀತಿಗನುಸಾರವಾಗಿ ಹಾಗೂ ಸಾರ್ವಜನಿಕ  ಹಣದ  ಪರಿಣಾಮಕಾರಿ ಬಳಕೆ ನಿಟ್ಟಿನಲ್ಲಿ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಖುರ್ಚು-ವೆಚ್ಚಗಳ ಸಚಿವಾಲಯದ ಕಾರ್ಯದರ್ಶಿ ಟಿ. ವಿ. ಸೋಮನಾಥನ್ ಹೇಳಿದ್ದಾರೆಂದು ವರದಿಯಾಗಿದೆ.

ಈ ಪ್ರಕ್ರಿಯೆ ಎರಡು ಹಂತಗಳಲ್ಲಿ ಒಂದು ಸಮಯ ಮಿತಿಯ ಅನುಸಾರ ನಡೆಯಲಿದ್ದು  ಸರಕಾರದ ಅನುದಾನ ಈ ಸಂಸ್ಥೆಗಳಿಗೆ ನಿಧಾನವಾಗಿ ನಿಲ್ಲಿಸಲಾಗುವುದು ಹಾಗೂ ಈ ಸಂಸ್ಥೆಗಳನ್ನು ಆಯಾಯ ಸಂಬಂಧಿತ ಕೈಗಾರಿಕೆಗಳು ಹಾಗೂ ಸಂಬಂಧಿತರು ಜವಾಬ್ದಾರಿ ವಹಿಸುವಂತೆ ಮಾಡಲಾಗುವುದು. ಈ ಸಂಸ್ಥೆಗಳಿಗೆ ನೀಡಲಾಗುವ ಅನುದಾನವನ್ನು ಪ್ರತಿ ವರ್ಷ ಶೇ 25 ರಷ್ಟು ಕಡಿಮೆಗೊಳಿಸಿ ಮೂರು ವರ್ಷಗಳ ಅವಧಿಯಲ್ಲಿ ಅವುಗಳನ್ನು ಕೇಂದ್ರ ಸರಕಾರದ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News