ಕೋವಿಡ್ ರೋಗಿಗಳೆದುರು ಪಿಪಿಇ ಕಿಟ್ ನೊಂದಿಗೆ ನರ್ತಿಸಿದ ವೈದ್ಯ!

Update: 2020-10-19 12:29 GMT

ಗುವಾಹಟಿ : ಅಸ್ಸಾಂನ ಸಿಲ್ಚಾರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವ ವೈದ್ಯರೊಬ್ಬರು ಪಿಪಿಇ ಕಿಟ್ ಧರಿಸಿ ಕೋವಿಡ್ ರೋಗಿಗಳೆದುರು ನರ್ತಿಸಿ ಅವರನ್ನು ಉಲ್ಲಸಿತರಾಗಿಸಲು ನಡೆಸಿದ ಯತ್ನದ ವೀಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ ಹಾಗೂ ರೋಗಿಗಳಲ್ಲಿ ಈ ಮೂಲಕ ಸಕಾರಾತ್ಮಕ ಚಿಂತನೆಗಳನ್ನು ಮೂಡಿಸಲು ಯತ್ನಿಸಿದ ಅವರ ಶ್ರಮವನ್ನು ಎಲ್ಲರೂ ಕೊಂಡಾಡಿದ್ದಾರೆ.

ಡಾ ಸಯ್ಯದ್  ಫೈಝಾನ್ ಅಹ್ಮದ್ ಎಂಬವರು ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ಈ ವೀಡಿಯೋದಲ್ಲಿ ಇಎನ್‍ಟಿ ವೈದ್ಯ ಡಾ. ಅರುಪ್ ಸೇನಾಪತಿ ಅವರು `ವಾರ್' ಚಿತ್ರದ `ಘುಂಘ್ರೂ' ಹಾಡಿಗೆ ಹೆಜ್ಜೆ ಹಾಕುತ್ತಿರುವುದು ಕಾಣಿಸುತ್ತದೆ. ಪಿಪಿಇ ಕಿಟ್ ಧರಿಸಿರುವ ಹೊರತಾಗಿ ಲೀಲಾಜಾಲವಾಗಿ ನರ್ತಿಸುತ್ತಿರುವ ಅವರ ವೀಡಿಯೋ ಎಲ್ಲರ ಮನಗೆದ್ದಿದೆ.

``ನನ್ನ ಸಹೋದ್ಯೋಗಿ ಡಾ ಅರುಪ್  ಸೇನಾಪತಿ, ಅಸ್ಸಾಂನ ಸಿಲ್ಚಾರ್ ಮೆಡಿಕಲ್ ಕಾಲೇಜಿನ ಇಎನ್‍ಟಿ ಸರ್ಜನ್, ಕೋವಿಡ್ ರೋಗಿಗಳನ್ನು ಖುಷಿಪಡಿಸಲು ಅವರೆದುರು ನರ್ತಿಸುತ್ತಿದ್ದಾರೆ,'' ಎಂದು ಡಾ. ಸಯ್ಯದ್ ಫೈಝಾನ್ ಅಹ್ಮದ್ ವೀಡಿಯೋ ಜತೆ ಮಾಡಿರುವ ಟ್ವೀಟ್‍ನಲ್ಲಿ ಬರೆದಿದ್ದಾರೆ.

`ವಾರ್' ಚಿತ್ರದಲ್ಲಿ ಈ ಹಾಡಿಗೆ ಕುಣಿದಿದ್ದ ನಟ ಹೃತಿಕ್ ರೋಶನ್ ಕೂಡ ಟ್ವೀಟ್ ಮಾಡಿ ವೈದ್ಯರನ್ನು ಪ್ರಶಂಸಿಸಿದ್ದಾರೆ. ``ಅವರಂತೆಯೇ  ಹೆಜ್ಜೆ ಹಾಕಿ ಕುಣಿಯಲು ಮುಂದೊಂದು ದಿನ ಅಸ್ಸಾಂನಲ್ಲಿ ನಾನು ಕಲಿಯುತ್ತೇನೆ ಎಂದು ಡಾ. ಅರುಪ್ ಅವರಿಗೆ ಹೇಳಿ, ಟೆರ್ರಿಫಿಕ್ ಸ್ಪಿರಿಟ್,'' ಎಂದು ಹೃತಿಕ್ ಬರೆದಿದ್ದಾರೆ.

ಸಿಲ್ಚಾರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ  ರಿಕವರಿ ಕೊಠಡಿಯಲ್ಲಿ ಕೆಲ ರೋಗಿಗಳು ಹಾಗೂ ವೈದ್ಯರ ತಂಡದೆದುರು ಈ ನೃತ್ಯ ಮಾಡಿದೆ. ಒಂದು ವಾರ ಅವಿರತ ಕರ್ತವ್ಯದ ಬಳಿಕ ನಾವೆಲ್ಲರೂ ಮರುದಿನದಿಂದ ಕಡ್ಡಾಯ ಕ್ವಾರಂಟೈನ್ ನಲ್ಲಿರಬೇಕಿತ್ತು. ಆ ದಿನ ನಾನು ನೃತ್ಯ ಮಾಡಬೇಕೆಂದು ಸಹೋದ್ಯೋಗಿಗಳು ಹೇಳಿದ್ದರು, ಎಲ್ಲರೂ ಖುಷಿ ಪಟ್ಟರು,'' ಎಂದು ಅವರು ಹೇಳಿದ್ದಾರೆ.

ಕಾಲೇಜು ದಿನಗಳಿಂದಲೇ ವೈದ್ಯರು ನೃತ್ಯಪಟುವಾಗಿದ್ದು ಅನೇಕ  ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನೂ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News