ತರಬೇತಿ ಅರ್ಧಕ್ಕೆ ಬಿಟ್ಟು ಹೋಗದಂತೆ ಪೊಲೀಸ್ ಇಲಾಖೆ ಆದೇಶ

Update: 2020-10-19 13:56 GMT

ಬೆಂಗಳೂರು, ಅ.19 : ಸಿಎಆರ್, ಡಿಎಆರ್ ಹಾಗೂ ರಿಸರ್ವ್ ಪೇದೆಗಳು ತರಬೇತಿ ಸಂದರ್ಭದಲ್ಲಿ ಸಿವಿಲ್ ಕಾನ್‍ಸ್ಟೇಬಲ್ ಹುದ್ದೆಗೆ ಆಯ್ಕೆಯಾದರೂ ತರಬೇತಿ ಅರ್ಧಕ್ಕೆ ಬಿಟ್ಟು ಹೋಗದಂತೆ ಪೊಲೀಸ್ ಇಲಾಖೆ ಆದೇಶಿಸಿದೆ.

ತರಬೇತಿಯನ್ನು ಅರ್ಧಕ್ಕೆ ಬಿಟ್ಟು ಸಿವಿಲ್ ಪೇದೆ ಹುದ್ದೆಗೆ ತೆರಳುತ್ತಿರುವವರ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲ ವ್ಯರ್ಥವಾಗುತ್ತಿದೆ. ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲರು, ಸಿವಿಲ್ ಪೇದೆ ಹುದ್ದೆಗೆ ಆಯ್ಕೆಯಾದ ಸಿಬ್ಬಂದಿಯ ಮೂಲ ದಾಖಲೆಗಳನ್ನು ಆಯ್ಕೆಯಾದ ಘಟಕಗಳಿಗೆ ಕಳುಹಿಸಬೇಕು. ನೇಮಕಾತಿ ಬಳಿಕ ತರಬೇತಿ ಪೂರ್ಣಗೊಳಿಸಿದ ಸಿವಿಲ್ ಪೇದೆಗಳಿಗೆ ಹುದ್ದೆಗೆ ಅನುಗುಣವಾಗಿ ಬ್ರಿಡ್ಜ್ ಕೋರ್ಸ್ ಆಯೋಜನೆ ಮಾಡಲಾಗುತ್ತದೆ. ತರಬೇತಿ ಘಟಕದಲ್ಲಿಯೇ ಅಭ್ಯರ್ಥಿಯನ್ನು ಸಿವಿಲ್ ಹುದ್ದೆಯ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬಹುದು.

ಆಯಾ ಘಟಕಾಧಿಕಾರಿಗಳು ಅಭ್ಯರ್ಥಿಯ ವರದಿ ಪಡೆದು ತರಬೇತಿ ಪಡೆಯುತ್ತಿದ್ದಾರೆ ಎಂದು ಪರಿಗಣಿಸಬೇಕು. ಜತೆಗೆ ವೇತನ ಭತ್ಯೆಗಳನ್ನು ಪಾವತಿಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ.

ಸಿವಿಲ್ ಪೇದೆ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ತರಬೇತಿ ಶಾಲೆಯಿಂದ ಅನಗತ್ಯವಾಗಿ ಹೊರಗೆ ಬರುವಂತಿಲ್ಲ. ಅಭ್ಯರ್ಥಿ ಖುದ್ದು ಹಾಜರಾತಿ ಇದ್ದರೇ ಮಾತ್ರ ಒಂದೆರಡು ದಿನ ಅನುಮತಿ ಪಡೆದು ಹೊರಬರಬಹುದು. ಸೂಚನೆಗಳನ್ನು ಅಭ್ಯರ್ಥಿಗಳು, ತರಬೇತಿ ಶಾಲೆಗಳ ಪ್ರಾಂಶುಪಾಲರು ಮತ್ತು ಘಟಕಾಧಿಕಾರಿಗಳು ಪಾಲನೆ ಮಾಡುವಂತೆ ಪೊಲೀಸ್ ಇಲಾಖೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News