ಉಪನ್ಯಾಸಕ ಅಭ್ಯರ್ಥಿಗಳ ಧರಣಿ ಹಿಂಪಡೆಯುವಂತೆ ಶಿಕ್ಷಣ ಇಲಾಖೆ ನೋಟಿಸ್

Update: 2020-10-19 14:00 GMT

ಬೆಂಗಳೂರು, ಅ.19 : ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ನೇಮಕಾತಿ ಆದೇಶಕ್ಕಾಗಿ ನಡೆಸುತ್ತಿರುವ ಧರಣಿಯನ್ನು ಹಿಂಪಡೆಯುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ನೋಟಿಸ್ ಜಾರಿಗೊಳಿಸಲಾಗಿದೆ.

ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗಳಿಗೆ ಆಯ್ಕೆಯಾಗಿರುವಂತಹ ಅಭ್ಯರ್ಥಿಗಳು ನೇಮಕಾತಿ ಆದೇಶ ನೀಡುವಂತೆ ಸತತವಾಗಿ ನಗರದ ಪಿಯು ಮಂಡಳಿ ಎದುರು ಧರಣಿ ನಡೆಸುತ್ತಿದ್ದಾರೆ. ಇಲ್ಲಿಗೆ ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿಯು ಯಾವುದೇ ಹಂತದಲ್ಲಿಯೂ ರದ್ದು ಮಾಡಲ್ಲ ಹಾಗೂ ತರಗತಿಗಳು ಆರಂಭವಾದ ಕೂಡಲೇ ನೇಮಕಾತಿ ಆದೇಶ ನೀಡಲಾಗುತ್ತದೆ ಎಂಬ ಭರವಸೆ ನೀಡಿದ್ದರು. ಆದರೂ, ಅದನ್ನು ಪ್ರತಿಭಟನಾಕಾರರು ಕೂಡಲೇ ಆದೇಶ ನೀಡುವಂತೆ ಪಟ್ಟು ಹಿಡಿದಿದ್ದಾರೆ.

ಹೀಗಾಗಿ, ಸಚಿವರು ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಲಾಗುತ್ತದೆ ಎಂದು ಹೇಳಿದ್ದರೂ ಧರಣಿ ಮುಂದುವರಿಸಲಾಗಿದೆ. ದಿನದಿಂದ ದಿನಕ್ಕೆ ಪ್ರತಿಭಟನೆ ಸ್ಥಳದಲ್ಲಿ ಪ್ರತಿಭಟನಾಕಾರರ ಸಂಖ್ಯೆ ಅಧಿಕವಾಗುತ್ತಿದೆ. ಕೋವಿಡ್ 19ರ ಪ್ರಾಮಾಣಿತ ಕಾರ್ಯಾಚರಣೆ ವಿಧಾನವನ್ನು(ಎಸ್‍ಓಪಿ) ಪಾಲಿಸದೆ ಗುಂಪು-ಗುಂಪಾಗಿ ಕುಳಿತು/ನಿಂತಿರುವುದರಿಂದ ನಿರ್ದೇಶನಾಲಯದ ಆವರಣದಲ್ಲಿರುವ ಧರಣಿ ನಿರತ ಅಭ್ಯರ್ಥಿಗಳ ಆರೋಗ್ಯಕ್ಕೆ ಹಾಗೂ ದಿನನಿತ್ಯ ಕಚೇರಿಗೆ ಬರುವ ಶಿಕ್ಷಣ ನಿರ್ದೇಶನಾಲಯದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ದೈನಂದಿನ ಕಾರ್ಯ ನಿರ್ವಹಿಸಲು ಅಡಚಣೆಯಾಗುತ್ತಿದೆ. ಹೀಗಾಗಿ, ಧರಣಿ ಹಿಂಪಡೆಯುವಂತೆ ಇಲಾಖೆಯ ಜಂಟಿ ನಿರ್ದೇಶಕರು ನೋಟಿಸ್‍ನಲ್ಲಿ ತಿಳಿಸಿದ್ದಾರೆ.

ಇಲಾಖೆ ನೋಟೀಸ್‍ಗೆ ಎಸ್‍ಎಫ್‍ಐ ವಿರೋಧ: ಸರಕಾರ ಹಾಗೂ ಶಿಕ್ಷಣ ಇಲಾಖೆಯು ನ್ಯಾಯಯುತ ಬೇಡಿಕೆಯನ್ನಿಟ್ಟುಕೊಂಡು ಹೋರಾಟ ಮಾಡುತ್ತಿರುವವ ಮೇಲೆ ನೋಟಿಸ್ ನೀಡುವ ಮೂಲಕ ಪ್ರತಿಭಟನಾ ಹಕ್ಕನ್ನು ದಮನ ಮಾಡಲು ಮುಂದಾಗಿದೆ. ಸರಕಾರವು ಕೂಡಲೇ ಉಪನ್ಯಾಸಕರ ಹುದ್ದೆಗಳಿಗೆ ಆಯ್ಕೆಯಾದವರಿಗೆ ನೇಮಕಾತಿ ಆದೇಶ ಹೊರಡಿಸಬೇಕು. ಅದನ್ನು ಬಿಟ್ಟು ಪ್ರತಿಭಟನೆ ಮಾಡಬೇಡಿ ಎಂದು ಹೇಳಿರುವುದು ಸರಿಯಲ್ಲ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ರಾಜ್ಯಾಧ್ಯಕ್ಷ ಅಮರೇಷನ್ ಕಡಗದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News