ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ: ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ

Update: 2020-10-19 14:05 GMT

ಬೆಂಗಳೂರು, ಅ.19: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪ್ರಭಾವದಿಂದಾಗಿ ರಾಜ್ಯದ ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಅ.21 ಹಾಗೂ 22ರಂದು ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ವಿಭಾಗದ ನಿರ್ದೇಶಕ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.

ಸೋಮವಾರದಂದು ದಕ್ಷಿಣ ಒಳನಾಡಿನಲ್ಲಿ ಹಲವು ಕಡೆ ಮಳೆಯಾಗಿದ್ದು, ಕರಾವಳಿ ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಿದೆ. ಹಾಸನದಲ್ಲಿ 7 ಸೆಂ.ಮೀ, ಕೃಷ್ಣರಾಜಸಾಗರ 5 ಸೆಂ.ಮೀ, ಸೋಮವಾರಪೇಟೆ ಹಾಗೂ ಬೆಂಗಳೂರಿನಲ್ಲಿ 4 ಸೆಂ.ಮೀ ಮಳೆಯಾಗಿದೆ ಎಂದು ತಿಳಿಸಿದ್ದಾರೆ.

24 ಗಂಟೆಗಳ ಒಳಗಾಗಿ ಬಂಗಾಳ ಉಪಸಾಗರದಲ್ಲಿ ವಾಯುಭಾರ ಕುಸಿತ ಉಂಟಾಗಲಿದೆ. ಇದರ ಪ್ರಭಾವದಿಂದ ಕರಾವಳಿ ಜಿಲ್ಲೆಗಳಲ್ಲಿ ಅ.19 ರಿಂದ 23 ರವರೆಗೆ ಬಹುತೇಕ ಎಲ್ಲಾ ಕಡೆ ಮಳೆಯಾಗಲಿದೆ. ಉ.ಕನ್ನಡ, ಉಡುಪಿ, ದ.ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿಯೂ ಅ. 19 ರಿಂದ 22ರವರೆಗೆ ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಶಿವಮೊಗ್ಗ, ಚಿಕ್ಕಮಂಗಳೂರು, ಹಾಸನ, ಕೊಡಗು, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಳಗಾವಿ, ಕಲ್ಬುರ್ಗಿ, ಯಾದಗಿರಿ, ಬೀದರ್, ವಿಜಯಪುರ, ರಾಯಚೂರು, ಬಾಗಲಕೋಟೆ, ಕೊಪ್ಪಳದಲ್ಲಿ, ಜಿಲ್ಲೆಗಳಲ್ಲಿ ಅ.19 ರಿಂದ 22 ರಂದು ಭಾರೀ ಮಳೆ ಬೀಳುವ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ನೀಡಲಾಗಿದೆ. ಅಲ್ಲದೇ ಬೆಂಗಳೂರಿನಲ್ಲಿ ಅ.21ರವರೆಗೆ ಕೆಲವು ಕಡೆ ಭಾರೀ ಮಳೆ ಹಾಗೂ ಕೆಲವು ಕಡೆ ಹಗುರ ಮಳೆಯಾಗಲಿದೆ ಎಂದು ಮಾಹಿತಿ ನೀಡಿದರು.

ಮೀನಿಗಾರರಿಗೆ ಎಚ್ಚರಿಕೆ

ಕರಾವಳಿ ಭಾಗದಲ್ಲಿ ಗಾಳಿಯ ವೇಗ ಹೆಚ್ಚಿರುವುದರಿಂದ ಮೀನುಗಾರರಿಗೆ ಅ.21, 22 ಮತ್ತು 23 ರಂದು ಸಮುದ್ರಕ್ಕಿಳಿಯದಂತೆ ಎಚ್ಚರಿಸಲಾಗಿದೆ. ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆ ಕರಾವಳಿ ಭಾಗಗಳಲ್ಲಿ ಅ.20ರಂದು ಯೆಲ್ಲೋ ಅಲರ್ಟ್ ಹಾಗೂ ಅ.21 ಹಾಗೂ 22ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News