ಉಪ ಚುನಾವಣೆ: ಶಿರಾದಲ್ಲಿ 15, ಆರ್.ಆರ್.ನಗರದಲ್ಲಿ 16 ಮಂದಿ ಅಂತಿಮ ಕಣದಲ್ಲಿ

Update: 2020-10-19 14:17 GMT

ಬೆಂಗಳೂರು, ಅ. 19: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಸೃಷ್ಟಿಸಿರುವ ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರ(ಆರ್.ಆರ್.ನಗರ) ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಸಹಿತ ಶಿರಾ ಕ್ಷೇತ್ರದಲ್ಲಿ 15 ಮತ್ತು ಆರ್.ಆರ್.ನಗರ ಕ್ಷೇತ್ರದಲ್ಲಿ 16 ಮಂದಿ ಅಂತಿಮವಾಗಿ ಚುನಾವಣಾ ಕಣದಲ್ಲಿದ್ದಾರೆ.

ನಾಮಪತ್ರ ಪರಿಶೀಲನೆ ಬಳಿಕ ಶಿರಾದಲ್ಲಿ 17 ಮತ್ತು ಆರ್.ಆರ್.ನಗರದಲ್ಲಿ 20 ಮಂದಿ ಕಣದಲ್ಲಿದ್ದರು. ನಾಮಪತ್ರ ಹಿಂಪಡೆಯಲು ಕೊನೆಯ ದಿನ (ಅ.19) ಶಿರಾ ಕ್ಷೇತ್ರದಲ್ಲಿ ನಿಸಾರ್ ಅಹಮದ್ ಮತ್ತು ತಿಮ್ಮರಾಜ್ ಗೌಡ, ಆರ್.ಆರ್.ನಗರ ಕ್ಷೇತ್ರದಲ್ಲಿ ಸಿ.ಆನಂದನ್, ಆರ್.ಕುಮಾರ್, ಮುನಿರತ್ನ ಮತ್ತು ಮುನಿರತ್ನಮ್ಮ ಎಂಬವರು ಸೇರಿ ಎರಡೂ ಕ್ಷೇತ್ರಗಳಲ್ಲಿ ಒಟ್ಟು ಆರು ಮಂದಿ ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ. ಹೀಗಾಗಿ ಶಿರಾ-15 ಮತ್ತು ಆರ್‍ಆರ್ ನಗರದಲ್ಲಿ 16 ಮಂದಿ ಉಪಚುನಾವಣಾ ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಬಿಜೆಪಿಯ ಡಾ.ರಾಜೇಶ್ ಗೌಡ, ಪ್ರತಿಪಕ್ಷ ಕಾಂಗ್ರೆಸ್‍ನ ಟಿ.ಬಿ.ಜಯಚಂದ್ರ ಹಾಗೂ ಜೆಡಿಎಸ್‍ನ ಅಮ್ಮಾಜಮ್ಮ ಸೇರಿದಂತೆ ಶಿರಾ ಕ್ಷೇತ್ರದಲ್ಲಿ ಒಟ್ಟು 15 ಮಂದಿ ಕಣದಲ್ಲಿದ್ದರೆ, ಇತ್ತ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬಿಜೆಪಿಯ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಚ್. ಹಾಗೂ ಜೆಡಿಎಸ್‍ನ ವಿ.ಕೃಷ್ಣಮೂರ್ತಿ ಸಹಿತ ಒಟ್ಟು 16 ಮಂದಿ ಅಂತಿಮವಾಗಿ ಅಖಾಡಲ್ಲಿದ್ದಾರೆ.

ಉಪಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕಣದಲ್ಲಿರುವ ಘಟಾನುಘಟಿ ಅಭ್ಯರ್ಥಿಗಳು ಅಧಿಕೃತವಾಗಿ ಪ್ರಚಾರದ ಅಖಾಡಕ್ಕೆ ಧುಮುಕಿದ್ದು, ಮಾರಕ ಕೋವಿಡ್-19 ಸೋಂಕಿನ ಆತಂಕ ಮತ್ತು ನಿರ್ಬಂಧದ ನಡುವೆಯೇ ಮತದಾರರ ಮನಗೆಲ್ಲಲು ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಈ ಮಧ್ಯೆ ಆ ಪಕ್ಷದಿಂದ ಈ ಪಕ್ಷಕ್ಕೆ, ಈ ಪಕ್ಷದಿಂದ ಆ ಪಕ್ಷಕ್ಕೆ ಮುಖಂಡರ ವಲಸೆಯೂ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, ಮೂರು ಪಕ್ಷಗಳ ಮುಖಂಡರು ಉಪಸಮರ ಗೆಲ್ಲಲು ಕಸರತ್ತು ನಡೆಸಿದ್ದಾರೆ.

ಚುನಾವಣಾ ಪ್ರಚಾರಕ್ಕೆ ಇನ್ನೂ ಕೇವಲ ಹತ್ತರಿಂದ ಹನ್ನೆರಡು ದಿನಗಳಷ್ಟೇ ಬಾಕಿ ಇದೆ. ಹೀಗಾಗಿ ಮೂರು ಪಕ್ಷಗಳ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಆದರೆ, ಕೆಲದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ, ಚುನಾವಣಾ ಪ್ರಚಾರಕ್ಕೆ ಅಡ್ಡಿಪಡಿಸುತ್ತಿದೆಯಾದರೂ, ಮಳೆಯ ನಡುವೆ ಮುಖಂಡರು ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ನ.3ರ ಮಂಗಳವಾರ ಬೆಳಗ್ಗೆ ಮತದಾನ, ನ.10ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದ್ದು ಅಂದೇ ಫಲಿತಾಂಶ ಬಹಿರಂಗಗೊಳ್ಳಲಿದೆ.

ರಾಜರಾಜೇಶ್ವರಿ ನಗರ (ಆರ್‍ಆರ್ ನಗರ) ಕ್ಷೇತ್ರದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಹೆಸರನ್ನು ಹೋಲುವ ರೀತಿಯಲ್ಲಿ ನಾಮಪತ್ರ ಸಲ್ಲಿಸಿ ಚುನಾವಣಾ ಅಖಾಡಕ್ಕಿಳಿದು ಗಮನ ಸೆಳೆದಿದ್ದ ಮುನಿರತ್ನ ಮತ್ತು ಮುನಿರತ್ನಮ್ಮ ಎಂಬವರು ಸೇರಿದಂತೆ ಒಟ್ಟು ನಾಲ್ಕು ಮಂದಿ ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News