ಇನ್ನೂ ನಾಲ್ಕೈದು ದಿನ ಮಳೆಯ ಮುನ್ಸೂಚನೆ: ಪ್ರವಾಹ ತಗ್ಗಿದರೂ ತಪ್ಪದ ಸಂತ್ರಸ್ತರಲ್ಲಿ ಆತಂಕ

Update: 2020-10-19 16:09 GMT

ಬೆಂಗಳೂರು, ಅ.19: ಒಂದು ವಾರದಿಂದ ಅಬ್ಬರಿಸಿ ಬೊಬ್ಬಿರಿದಿದ್ದ ಕೃಷ್ಣಾ ಮತ್ತು ಭೀಮಾ ನದಿ ಪ್ರವಾಹದ ಅಬ್ಬರ ಕೊಂಚ ತಗ್ಗಿದೆ. ಆದರೆ, ಹವಾಮಾನ ಇಲಾಖೆ ಇನ್ನೂ ನಾಲ್ಕೈದು ದಿನ ಮಳೆ ಸುರಿಯಲಿದೆ ಎಂಬ ಮುನ್ಸೂಚನೆ ನೀಡಿದ್ದು, ರಾಜ್ಯದ ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಸಂತ್ರಸ್ತರಲ್ಲಿ ಆತಂಕ ಮನೆ ಮಾಡಿದೆ.

ಈ ನಡುವೆ ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಖುದ್ದು ಪರಿಶೀಲನೆ ನಡೆಸಿದ ಕಂದಾಯ ಸಚಿವ ಆರ್. ಅಶೋಕ್, `ಪ್ರವಾಹ ಸಂತ್ರಸ್ತರಿಗೆ ಕೂಡಲೇ ಪರಿಹಾರ ಮತ್ತು ವಸತಿ ಸೌಲಭ್ಯ ಕಲ್ಪಿಸಲು ಸರಕಾರ ಕ್ರಮ ಕೈಗೊಳ್ಳಲಿದೆ' ಎಂದು ಅಭಯ ನೀಡಿದ್ದಾರೆ. ಅಲ್ಲದೆ, `ಕಾಳಜಿ ಕೇಂದ್ರಗಳಲ್ಲಿ ಜಾತೀಯತೆ ಸೇರಿದಂತೆ ಯಾವುದೇ ರೀತಿಯ ತಾರತಮ್ಯ, ಕರ್ತವ್ಯ ನಿರ್ಲಕ್ಷ್ಯವನ್ನು ಸರಕಾರ ಸಹಿಸುವುದಿಲ್ಲ' ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

`ಪ್ರವಾಹ ಪರಿಸ್ಥಿತಿ ಇರುವಾಗ ವೈಮಾನಿಕ ಸಮೀಕ್ಷೆ ಮಾಡುವುದು ಸರಿ. ಆದರೆ, ಈಗ ಪ್ರವಾಹ ಪೀಡಿತ ಸ್ಥಳಗಳಿಗೆ ರಸ್ತೆ ಮೂಲಕ ಸಂಚರಿಸಲು, ನಿರಾಶ್ರಿತ ಕೇಂದ್ರಗಳಲ್ಲಿರುವ ಜನರನ್ನು ಭೇಟಿ ಮಾಡಲು ಅವಕಾಶವಿದ್ದಾಗ್ಯೂ ಸಿಎಂ ಯಡಿಯೂರಪ್ಪ ವಿಮಾನದಲ್ಲೇ ಸಮೀಕ್ಷೆ ಮಾಡಿದರೆ ಜನರ ಕಷ್ಟ ಏನು ಅಂತ ಹೇಗೆ ತಿಳಿಯುತ್ತೆ' ಎಂದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅ.21ರಂದು ವೈಮಾನಿಕ ಸಮೀಕ್ಷೆ ಜೊತೆಗೆ ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿ ವಾಸ್ತವ ಪರಿಸ್ಥಿತಿಯನ್ನು ಅರಿತುಕೊಳ್ಳಲಿದ್ದಾರೆಂದು ಸಿಎಂ ಕಚೇರಿ ಪ್ರಕಟಣೆ ತಿಳಿಸಿದೆ.

ಅಸಮಾಧಾನ: ರಾಜ್ಯದ ಕಲಬುರಗಿ ಜಿಲ್ಲೆ ಸೇರಿದಂತೆ ವಿವಿಧೆಡೆಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸರಕಾರ ಸ್ಥಾಪಿಸಿರುವ ಕಾಳಜಿ ಕೇಂದ್ರಗಳಲ್ಲಿ `ಜಾತಿ ತಾರತಮ್ಯ' ಆರೋಪ ಕೇಳಿಬಂದಿದೆ. ಅಲ್ಲದೆ, ಸಂತ್ರಸ್ತರಿಗೆ ಸಮರ್ಪಕವಾಗಿ ಊಟ-ಉಪಾಹಾರ, ಕುಡಿಯುವ ನೀರು, ಹಾಸಿಗೆ, ಹೊದಿಕೆ ನೀಡುತ್ತಿಲ್ಲ ಎಂಬ ಪ್ರವಾಹ ಸಂತ್ರಸ್ತರಿಂದ ಅಸಮಾಧಾನವೂ ವ್ಯಕ್ತವಾಗಿದೆ.

ಪಿಡಿಒ, ಲೆಕ್ಕಾಧಿಕಾರಿ ಅಮಾನತು: ಕಲಬುರಗಿಯ ಯಾತ್ರಿ ನಿವಾಸದಲ್ಲಿ ಪ್ರಾರಂಭಿಸಿರುವ ಕಾಳಜಿ ಕೇಂದ್ರದಲ್ಲಿನ ಪ್ರವಾಹ ಸಂತ್ರಸ್ತರಿಗೆ ಊಟ ಮತ್ತು ಕುಡಿಯುವ ನೀರಿನ ಸೂಕ್ತ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಪರಿಗಣಿಸಿ ಪಿಡಿಓ ಹಾಗೂ ಗ್ರಾಮ ಲೆಕ್ಕಾಧಿಕಾರಿಯನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ವಿ.ವಿ.ಜೋತ್ನ್ಯಾ ಆದೇಶ ಹೊರಡಿಸಿದ್ದಾರೆ.

ಅಫಜಲಪೂರ ತಾಲೂಕಿನ ದೇವಲ ಗಾಣಗಾಪೂರದ ಯಾತ್ರಿ ನಿವಾಸದಲ್ಲಿ ಸಂತ್ರಸ್ತರ ಕಾಳಜಿ ಕೇಂದ್ರದಕ್ಕೆ ಭೇಟಿ ನೀಡಿದ ವೇಳೆ ಸಂತ್ರಸ್ತರು ಜಿಲ್ಲಾಧಿಕಾರಿಗೆ ದೂರು ನೀಡಿದ ಹಿನ್ನೆಯಲ್ಲಿ ಕ್ರಮಕೈಗೊಳಲಾಗಿದೆ ಎಂದು ಗೊತ್ತಾಗಿದೆ. ಸಂತ್ರಸ್ತರಿಗೆ ಊಟ-ಉಪಹಾರ ಸರಿಯಾಗಿ ನೀಡುತ್ತಿಲ್ಲ, ಅನ್ನದಲ್ಲಿ ಹುಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂಬ ದೂರಿನ ಮೇರೆಗೆ ಕರ್ತವ್ಯ ಲೋಪಕ್ಕಾಗಿ ಪಿಡಿಒ ಗುರುನಾಥ ಹರಿದಾಸ ಮತ್ತು ಗ್ರಾಮ ಲೆಕ್ಕಾಧಿಕಾರಿ ಭಾಗ್ಯಶ್ರೀ ಯಳವಾರ ಅವರನ್ನು ಅಮಾನತುಗೊಳಿಸಿದ್ದಾರೆ.

ತಾಯಿ-ಮಗು ರಕ್ಷಣೆ: ಭೀಮಾ ನದಿ ತುಂಬಿ ಹರಿಯುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಪಿಎಸ್ಸೈ ಸಂಗಮೇಶ್ ಅಂಗಡಿ, ತಾಯಿ-ಮಗುವನ್ನು ರಕ್ಷಿಸಿ ದಡಕ್ಕೆ ಸೇರಿಸಿದರು. ಭೀಮಾನದಿಯ ಭಾರಿ ಪ್ರವಾಹದ ಹಿನ್ನೆಲೆಯಲ್ಲಿ ತಾಲೂಕಿನ ನದಿ ಪಕ್ಕದಲ್ಲಿರುವ ಗ್ರಾಮಗಳು ಮುಳುಗಡೆಯಾಗಿದ್ದು, ಗ್ರಾಮದಲ್ಲಿರುವ ಸಾರ್ವಜನಿಕರನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಸಾಂಕ್ರಾಮಿಕ ರೋಗದ ಭೀತಿ: ಪ್ರವಾಹ ಕೊಂಚ ಇಳಿಮುಖವಾಗಿದ್ದು, ನೀರು ನಿಂತ ರಸ್ತೆ, ಮನೆ, ಹೊಲ ಗದ್ದೆಗಳಲ್ಲಿ ಕೆಸರು, ಹೊಸಲು ತುಂಬಿಗೊಂಡಿದ್ದು, ಎಲ್ಲಡೆ ಗಬ್ಬು ವಾಸನೆ ಬೀರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಜನರಲ್ಲಿದೆ. ನೂರಾರು ಕುಟುಂಬಗಳು ಮನೆ-ಮಠಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದು, ಜಮೀನುಗಳಿಗೆ ನೀರು ನುಗ್ಗಿ ಸಾವಿರಾರು ಎಕರೆಗಳಲ್ಲಿ ಬೆಳೆದ ಬೆಳೆ ಸಂಪೂರ್ಣ ನಾಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News