ಆರೋಗ್ಯ ಸೇತು ಮೊಬೈಲ್ ಆ್ಯಪ್ ಕಡ್ಡಾಯವಲ್ಲ: ಹೈಕೋರ್ಟ್ ಗೆ ಕೇಂದ್ರ ಸರಕಾರದ ಸ್ಪಷ್ಟನೆ

Update: 2020-10-19 16:25 GMT

ಬೆಂಗಳೂರು, ಅ.19: ವಿಮಾನ ಮತ್ತು ರೈಲು ಪ್ರಯಾಣಿಕರು ಆರೋಗ್ಯ ಸೇತು ಮೊಬೈಲ್ ಆ್ಯಪ್ ಅನ್ನು ಅಳವಡಿಸಿಕೊಳ್ಳುವ ವಿಚಾರದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ(ಎನ್‍ಇಸಿ)ಯ ತೀರ್ಮಾನವೇ ಅಂತಿಮವಾಗಿರುತ್ತದೆ. ಆ್ಯಪ್ ಬಳಕೆ ಕಡ್ಡಾಯವಲ್ಲ ಎಂದು ಎನ್‍ಇಸಿ ಈಗಾಗಲೇ ಸ್ಪಷ್ಟಪಡಿಸಿದೆ ಎಂದು ಕೇಂದ್ರ ಸರಕಾರ ಹೈಕೋರ್ಟ್‍ಗೆ ತಿಳಿಸಿದೆ.

ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯ ಪ್ರಶ್ನಿಸಿ ನಗರದ ಅನಿವರ್ ಎ. ಅರವಿಂದ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಕೇಂದ್ರ ಈ ಸ್ಪಷ್ಟನೆ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಕೇಂದ್ರ ಸರಕಾರ ಈವರೆಗೂ ಆ್ಯಪ್ ಕಡ್ಡಾಯ ಬಳಕೆ ಕುರಿತಂತೆ ಆಕ್ಷೇಪಣೆ ಸಲ್ಲಿಸಿಲ್ಲ ಪೀಠಕ್ಕೆ ತಿಳಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಕೇಂದ್ರದ ಪರ ವಕೀಲರು, ಈ ವಿಚಾರದಲ್ಲಿ ಎನ್‍ಇಸಿ ತೀರ್ಮಾನವೇ ಅಂತಿಮ. ಆ್ಯಪ್ ಇಲ್ಲದ ಕಾರಣಕ್ಕೆ ಸೇವೆಗಳನ್ನು ನಿರಾಕರಿಸುವುದಾಗಿ ಕೇಂದ್ರದ ಯಾವುದೇ ಇಲಾಖೆಯೂ ಹೇಳಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕೆಲವೊಮ್ಮೆ ಸ್ಥಿತಿವಂತರೂ ಮೊಬೈಲ್ ಬಳಕೆ ಮಾಡುವುದಿಲ್ಲ. ಅಂತವರಿಗೆ ಆ್ಯಪ್ ಕಡ್ಡಾಯಗೊಳಿಸುವುದಾದರೂ ಹೇಗೆ ಎಂದು ಪ್ರಶ್ನಿಸಿತು. ಅಲ್ಲದೇ, ಸರಕಾರಿ ಸಂಸ್ಥೆಗಳು ಆ್ಯಪ್ ಬಳಕೆಯನ್ನು ಕಡ್ಡಾಯಗೊಳಿಸಬಾರದು ಮತ್ತು ಆ್ಯಪ್ ಇಲ್ಲವೆಂಬ ಕಾರಣಕ್ಕೆ ಸರಕಾರದ ಸೇವೆ ಅಥವಾ ಸೌಲಭ್ಯಗಳನ್ನು ನಿರಾಕರಿಸುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿ, ವಿಚಾರಣೆ ಮುಂದೂಡಿತು.

ಏರ್ ಪೋರ್ಟ್ ಸೇರಿದಂತೆ ಕೆಲ ಸಂಸ್ಥೆಗಳು ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯಗೊಳಿಸಲು ಮುಂದಾದ ಹಿನ್ನೆಲೆಯಲ್ಲಿ ಪಿಐಎಲ್ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News