×
Ad

ಬೊಂಬೆಗೆ 'ಬಿಐಎಸ್ ಮುದ್ರೆ': ನಿರ್ಧಾರ ಹಿಂಪಡೆಯಲು ಎಚ್.ಡಿ.ಕುಮಾರಸ್ವಾಮಿ ಆಗ್ರಹ

Update: 2020-10-19 21:57 IST

ಬೆಂಗಳೂರು, ಅ. 19: `ಬೊಂಬೆ ತಯಾರಕರಿಗೆ ಬಿಐಎಸ್ (ಭಾರತೀಯ ಮಾನಕ ಬ್ಯೂರೋ) ಮುದ್ರೆ ಕಡ್ಡಾಯಗೊಳಿಸಿರುವ ಕೇಂದ್ರ ಸರಕಾರ ಸಾಂಪ್ರದಾಯಿಕ ಕಲೆ ಅವಲಂಬಿಸಿರುವ ಬೊಂಬೆ ತಯಾರಕರ ಮೇಲೆ ಗದಾ ಪ್ರಹಾರ ಮಾಡಿದೆ. ಈ ನಿರ್ಧಾರವನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಆಗ್ರಹಿಸಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, `ಬಿಐಎಸ್ ಪ್ರಮಾಣಪತ್ರ ಪಡೆಯಲು ಸಾವಿರಾರು ರೂಪಾಯಿಗಳ ವೆಚ್ಚ ಸಣ್ಣ ಬೊಂಬೆಗಳ ತಯಾರಕರಿಗೆ ದುಬಾರಿ ಆಗಲಿದ್ದು, ದೇಶೀಯ ಬೊಂಬೆ ಉತ್ಪಾದಕರ ಭವಿಷ್ಯಕ್ಕೆ ಮಾರಕವಾಗಲಿದೆ. ಕೇಂದ್ರದ ಈ ನಿರ್ಧಾರ ಗುಡಿ ಕೈಗಾರಿಕೆಗಳಿಗೆ ಮುಳ್ಳಾಗಲಿದೆ. `ಮನ್ ಕಿ ಬಾತ್'ನಲ್ಲಿ ಚನ್ನಪಟ್ಟಣದ ವಿಶ್ವಖ್ಯಾತ ಆಟಿಕೆಗಳ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದ ಪ್ರಧಾನಿ ಮೋದಿ ಅವರು ಸಾಂಪ್ರದಾಯಕ ಬೊಂಬೆ ತಯಾರಕರ ಮೇಲೆ ಕೆಂಗಣ್ಣು ಬೀರಿದ್ದಾರೆ' ಎಂದು ದೂರಿದ್ದಾರೆ.

`ಕೇವಲ ದೊಡ್ಡ ಉದ್ದಿಮೆದಾರರ ಹಿತಕಾಯುವ ಇಂತಹ ನಿರ್ಧಾರದಿಂದ ಆಟಿಕೆ ತಯಾರಿಕೆ ನಂಬಿ ಬದುಕುತ್ತಿರುವ ಲಕ್ಷಾಂತರ ಮಂದಿ ಉದ್ಯೋಗಕ್ಕೆ ಸಂಚಕಾರ ಬರಲಿದೆ. ಬೊಂಬೆ ತಯಾರಕರಿಗೆ ಬಿಐಎಸ್ ಮುದ್ರೆ ಕಡ್ಡಾಯಗೊಳಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಕೂಡಲೇ ವಾಪಸು ಪಡೆಯುವ ಮೂಲಕ ಗುಡಿ ಕೈಗಾರಿಕೆಗಳ ರಕ್ಷಣೆಗೆ ಮುಂದಾಗಬೇಕು' ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News