ಮಕ್ಕಳ ಹಕ್ಕಿನ ರಕ್ಷಣಾ ಆಯೋಗ ಎಂಬ ದಾರಿತಪ್ಪಿದ ಮಗು

Update: 2020-10-20 05:58 GMT

ಬಾಲ ಕಾರ್ಮಿಕ ಪದ್ಧತಿಯನ್ನಷ್ಟೇ ಮಕ್ಕಳ ಮೇಲೆ ನಡೆಯುವ ದೌರ್ಜನ್ಯವೆಂದು ಭಾವಿಸಿದ್ದ ಕಾಲವೊಂದಿತ್ತು. ಈಗಲೂ ಬಾಲ ಕಾರ್ಮಿಕ ವ್ಯವಸ್ಥೆಯನ್ನು ತಡೆಯಲು ಸರಕಾರ ಯೋಜನೆಗಳನ್ನು ರೂಪಿಸಿದೆಯಾದರೂ ಅದು ಮಕ್ಕಳನ್ನು ಸ್ವತಂತ್ರಗೊಳಿಸದೆ ಇನ್ನಷ್ಟು ಸಂಕಟಗಳಿಗೆ ತಳ್ಳುತ್ತಿವೆೆ. ಮಾನವಹಕ್ಕುಗಳ ವ್ಯಾಖ್ಯಾನ ವಿಸ್ತಾರವಾದಂತೆಯೇ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳ ಬೇರೆ ಬೇರೆ ಮಗ್ಗುಲುಗಳು ಚರ್ಚೆಯಾಗ ತೊಡಗಿತು. ಮಕ್ಕಳ ಬಾಲ್ಯದ ಹಕ್ಕುಗಳನ್ನು ಪಾಲಕರು ನಿಯಂತ್ರಿಸುವಂತಿಲ್ಲ ಎನ್ನುವುದು ಮುನ್ನೆಲೆಗೆ ಬಂತು. ಲೈಂಗಿಕ ದೌರ್ಜನ್ಯ, ಶಿಕ್ಷಣದ ಒತ್ತಡ, ಬೀದಿ ಮಕ್ಕಳ ಸ್ಥಿತಿಗತಿಗಳು ಚರ್ಚೆಗೊಳಗಾಗ ತೊಡಗಿದವು. ಮಕ್ಕಳ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ ರಾಷ್ಟ್ರೀಯ ಆಯೋಗದ ರಚನೆಯೂ ಆಯಿತು. ಅಂತರ್‌ರಾಷ್ಟ್ರೀಯ ಮಟ್ಟದ ಹಲವು ಸರಕಾರೇತರ ಸಂಸ್ಥೆಗಳು ದೇಶದ ಮಕ್ಕಳ ಸ್ಥಿತಿಗತಿಗಳ ಮೇಲೆ ಕಣ್ಣಿಡತೊಡಗಿದವು. ಯಾವಾಗ ಈ ಸಂಸ್ಥೆಗಳು ಸರಕಾರವನ್ನೇ ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದವೋ ಆಗ ಸರಕಾರ, ಮಕ್ಕಳ ರಕ್ಷಣೆಗಾಗಿ ನೇಮಕವಾಗಿರುವ ಆಯೋಗವನ್ನು ಮಕ್ಕಳ ವಿರುದ್ಧವೇ ಸಂಚು ನಡೆಸುವುದಕ್ಕೆ ಬಳಸತೊಡಗಿತು.

ಸರಕಾರೇತರ ಶಿಶು ಆರೈಕೆ ಸಂಸ್ಥೆಗಳು ದೇಶದ ರಾಜಕೀಯ ನೀತಿಯಿಂದಾಗಿ  ದೌರ್ಜನ್ಯಕ್ಕೊಳಗಾಗುತ್ತಿರುವ ಮಕ್ಕಳ ಕುರಿತಂತೆ ಮಾತನಾಡಲು ಶುರು ಹಚ್ಚಿದಂತೆಯೇ ಅವುಗಳ ಬಾಯಿ ಮುಚ್ಚಿಸಲು , ನ್ಯಾಷನಲ್ ಕಮಿಷನ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್-(ಎನ್‌ಸಿಪಿಸಿಆರ್)ನ್ನು ಬಳಸುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಮಕ್ಕಳ ಮೇಲೆ ಕಾಳಜಿಯನ್ನು ವಹಿಸಬೇಕಾಗಿರುವ ಎನ್‌ಸಿಪಿಸಿಆರ್, ಇದೀಗ ಮಕ್ಕಳ ಬಗ್ಗೆ ಕಾಳಜಿವಹಿಸುವ ಸಂಸ್ಥೆಗಳನ್ನು ಗುರಿಯಾಗಿಸಲು ಬಳಸಲ್ಪಡುತ್ತಿದೆ. ಇತ್ತೀಚೆಗೆ ಮಕ್ಕಳು ರಾಜಕೀಯ ಕಾರಣದಿಂದ ಹೆಚ್ಚು ಹೆಚ್ಚು ಸಂತ್ರಸ್ತರಾಗುತ್ತಿದ್ದಾರೆ. ಸರಕಾರದ ಆರ್ಥಿಕ ನೀತಿಯಿಂದಾಗಿ ಹೆಚ್ಚುತ್ತಿರುವ ಬಡತನದ ನೇರ ಬಲಿಪಶುಗಳು ಮಕ್ಕಳೇ ಆಗಿದ್ದಾರೆ. ಲಾಕ್‌ಡೌನ್ ಹೇಗೆ ಮಕ್ಕಳ ಮೇಲೆ ತನ್ನ ದುಷ್ಪರಿಣಾಮಗಳನ್ನು ಬೀರಿದೆ, ಅವರ ಆಹಾರ, ಶಿಕ್ಷಣ, ಆರೋಗ್ಯಗಳನ್ನ್ನು ಕಸಿದುಕೊಂಡಿದೆ ಎನ್ನುವುದರ ಕುರಿತಂತೆ ಸರಕಾರೇತರ ಸಂಸ್ಥೆಗಳು ಬೆಳಕು ಚೆಲ್ಲುತ್ತಿವೆ. ಇದು ಸರಕಾರದ ತೀವ್ರ ಅಸಹನೆಗೆ ಕಾರಣವಾಗಿದೆ. ಎನ್‌ಆರ್‌ಸಿಯ ಹೆಸರಿನಲ್ಲಿ ಬಂಧನ ಕೇಂದ್ರಗಳನ್ನು ಸರಕಾರ ನಿರ್ಮಾಣ ಮಾಡಿದಾಗಲೂ ಅದರೊಳಗೆ ತಮ್ಮ ಬಾಲ್ಯಗಳನ್ನು ಕಳೆದುಕೊಂಡ ಸಾವಿರಾರು ಮಕ್ಕಳಿದ್ದರು. ಎನ್‌ಜಿಒಗಳು ಈ ಬಂಧನ ಕೇಂದ್ರದೊಳಗಿರುವ ಮಕ್ಕಳ ಭವಿಷ್ಯದ ಕುರಿತಂತೆಯೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಧ್ವನಿಯೆತ್ತಿದ್ದವು.

ಮಕ್ಕಳ ಭವಿಷ್ಯದ ಕುರಿತಂತೆ ಮಾತನಾಡುವ ಸಂಸ್ಥೆಗಳೆಲ್ಲವೂ ಸರಕಾರದ ವಿರುದ್ಧ ‘ಅಂತರ್‌ರಾಷ್ಟ್ರೀಯ ಮಟ್ಟದ ಸಂಚು ನಡೆಸುತ್ತಿದೆ’ ಎಂದು ಸರಕಾರ ಆರೋಪಿಸತೊಡಗಿತು. ಎನ್‌ಸಿಪಿಸಿಆರ್ ನ್ನು ಈ ಸಂಸ್ಥೆಗಳ ವಿರುದ್ಧ ಛೂ ಬಿಡತೊಡಗಿತು. ಶಿಶು ಆರೈಕೆ ಸಂಸ್ಥೆಗಳ (ಚೈಲ್ಡ್ ಕೇರ್ ಇನ್‌ಸ್ಟಿಟ್ಯೂಶನ್ಸ್-ಸಿಸಿಐ) ಕಾರ್ಯನಿರ್ವಹಣೆಯ ಮೇಲೆ ಉಸ್ತುವಾರಿ ನಡೆಸುವುದು ಮತ್ತು ಅದರ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ಸಾಮಾಜಿಕ ಲೆಕ್ಕ ಪರಿಶೋಧನೆ (ಸೋಷಿಯಲ್ ಆಡಿಟ್) ನಡೆಸುವುದು ಈ ಆಯೋಗಕ್ಕೆ ನಿರ್ದಿಷ್ಟವಾಗಿ ವಹಿಸಲಾಗಿರುವ ಕೆಲಸ. 2015ರಲ್ಲಿ ಆರಂಭಿಸಲಾದ ಈ ಆಡಿಟ್ ಪೂರ್ಣಗೊಂಡಾಗ ಎನ್‌ಸಿಪಿಸಿಆರ್ ಎಲ್ಲ ಶಿಶು ಆರೈಕೆ ಸಂಸ್ಥೆಗಳಲ್ಲಿರುವ ಮಕ್ಕಳನ್ನು ಅವರ ಪೋಷಕರ ಬಳಿಗೆ, ಮನೆಗಳಿಗೆ ಕಳುಹಿಸಿ ಒಂದು ನಿರ್ದಿಷ್ಟ ಅವಧಿಯೊಳಗೆ ಅವರಿಗೆ ಪುನರ್ವಸತಿ ಕಲ್ಪಿಸಬೇಕೆಂದು ಎಂಟು ರಾಜ್ಯಗಳಲ್ಲಿ ಸಂಬಂಧಿತ ಜಿಲ್ಲಾ ನ್ಯಾಯಾಧೀಶರಿಗೆ ನಿರ್ದೇಶನ ನೀಡಿತ್ತು. ಈ ಬಗ್ಗೆ ಸಂಘಟನೆಗಳು ಹಲವು ರೀತಿಯ ಆತಂಕಗಳನ್ನು ವ್ಯಕ್ತಪಡಿಸಿವೆ. ಯಾಕೆಂದರೆ ಈ ಮಕ್ಕಳಲ್ಲಿ ಬಹುತೇಕ ಮಕ್ಕಳು ಅವರ ಮನೆಗಳಲ್ಲಿರುವ ಹಿಂಸಾತ್ಮಕ ಶೋಷಣೆಯ ಪರಿಸ್ಥಿತಿಗಳ ಕಾರಣಕ್ಕಾಗಿಯೇ ಸಿಸಿಐಗಳಲ್ಲಿದ್ದಾರೆ. ಹಾಗಾಗಿ ಸಾಕಷ್ಟು ಪೂರ್ವಯೋಜನೆ ಇಲ್ಲದೆ ಆ ಮಕ್ಕಳನ್ನು ಒಂದು ನಿರ್ದಿಷ್ಟ ಅವಧಿಯೊಳಗೆ ಅವಸರದಲ್ಲಿ ಕಡ್ಡಾಯವಾಗಿ ಅವರ ಮನೆಗಳಿಗೆ ಮರಳಿಸಿದಲ್ಲಿ ಮತ್ತೆ ಪುನಃ ಅದೇ ಗೃಹ ಹಿಂಸೆ ಹಾಗೂ ಶೋಷಣೆಗೆ ಗುರಿಯಾಗುವ ಅಪಾಯಗಳಿವೆ. ಆದುದರಿಂದ, ಸಂತ್ರಸ್ತ ಮಕ್ಕಳನ್ನು ಮನೆಗೆ ಮರಳಿಸುವುದರಿಂದ ಮಕ್ಕಳ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎಂದು ಸಿಸಿಐ ಹೇಳುತ್ತಿದೆ. ಇನ್ನೊಂದೆಡೆ, ಗಾಂಧಿ ಜಯಂತಿಯ ಸಂದರ್ಭದಲ್ಲಿ ವಿದೇಶದಿಂದ ಬಂದ ಹಣವನ್ನು ಯಾವುದೇ ರೀತಿಯಲ್ಲಿಯಾದರೂ ದುರುಪಯೋಗ ಪಡಿಸಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚುವ ನೆಪದಲ್ಲಿ ಎನ್‌ಸಿಪಿಸಿಆರ್, ಸರಕಾರೇತರ ಸಂಸ್ಥೆಗಳು (ಎನ್‌ಜಿಒ) ನಡೆಸುವ ಆಯ್ದ ಶಿಶು ಆರೈಕೆ ಸಂಸ್ಥೆಗಳ ಮೇಲೆ ದಾಳಿ ನಡೆಸಿರುವ ವರದಿ ಬಂದಿದೆ.

ವಿದೇಶಿ ಹಣ ನಿಯಂತ್ರಣ ಕಾಯ್ದೆಯ ನಿಯಮಗಳನ್ನು ತನ್ನ ಕೈಗೆ ತೆಗೆದುಕೊಳ್ಳುವುದು ಎನ್‌ಸಿಪಿಸಿಆರ್‌ನ ಅಧಿಕಾರ ವ್ಯಾಪ್ತಿಯೊಳಕ್ಕೆ ಬರುವುದಿಲ್ಲ. ಇಷ್ಟೇ ಅಲ್ಲದೆ ನಾಗರಿಕ ಪೌರತ್ವ ತಿದ್ದುಪಡಿಯಂತಹ ವಿಷಯಗಳಲ್ಲಿ ಕೇಂದ್ರ ಸರಕಾರವನ್ನು ನೇರವಾಗಿ ಟೀಕಿಸಿದ್ದ ವ್ಯಕ್ತಿಗಳನ್ನು ಗುರಿಯಾಗಿ ಈ ದಾಳಿಗಳು ನಡೆಯುತ್ತಿವೆ. ಈ ಹಿಂದೆ ಮನೆಯಿಲ್ಲದೆ ಈಗ ಸಿಸಿಐಗಳಲ್ಲಿರುವ ಮಕ್ಕಳು ಒಂದು ನಿರ್ದಿಷ್ಟ (ರೋಹಿಂಗ್ಯಾ) ಸಮುದಾಯಕ್ಕೆ ಸೇರಿದವರು ಎಂಬುದನ್ನು ಎನ್‌ಸಿಪಿಸಿಆರ್‌ನ ಸ್ವತಃ ಅಧ್ಯಕ್ಷರ ನೇತೃತ್ವದ ಒಂದು ವಿಚಾರಣೆ ಆರೋಪಿಸಿದೆ. ಎನ್‌ಸಿಪಿಸಿಆರ್ ಈ ಮೂಲಕ ಮಕ್ಕಳ ವಿಷಯದಲ್ಲಿ ತನ್ನ ಜನಾಂಗೀಯ ಮನಸ್ಥಿತಿಯನ್ನು ಪ್ರದರ್ಶಿಸಿದೆ. ರೋಹಿಂಗ್ಯಾದಂತಹ ಹಿಂಸಾಚಾರ ಸಂತ್ರಸ್ತರ ಪರವಾಗಿ ಮಾತನಾಡುವ ಸಂಸ್ಥೆಗಳ ಬಾಯಿಯನ್ನು ಶಾಶ್ವತವಾಗಿ ಮುಚ್ಚಿಸುವ ಉದ್ದೇಶವನ್ನು ಸರಕಾರ ಹೊಂದಿದಂತಿದೆ. ಇದೇ ಸಂದರ್ಭದಲ್ಲಿ ದೇಶಾದ್ಯಂತ ಶೋಷಿತ ಸಮುದಾಯದ ಹೆಣ್ಣು ಮಕ್ಕಳನ್ನೇ ಗುರಿಯಾಗಿ ಅತ್ಯಾಚಾರದಂತಹ ಬರ್ಬರ ದೌರ್ಜನ್ಯಗಳು ನಡೆಯುತ್ತಿರುವುದನ್ನೂ ಸರಕಾರೇತರ ಸಂಸ್ಥೆಗಳು ಗಮನಿಸುತ್ತಿವೆ. ಈ ಸಂದರ್ಭದಲ್ಲಿ ಸರಕಾರದ ಕಾರ್ಯನಿರ್ವಹಣೆಗಳ ವೈಫಲ್ಯಗಳನ್ನು ಬಹಿರಂಗವಾಗಿ ಸಂಸ್ಥೆಗಳು ಟೀಕಿಸುತ್ತಿರುವುದು ಕೂಡ ಸರಕಾರದ ಸಿಟ್ಟಿಗೆ ಕಾರಣವಾಗಿದೆ.

 ಈಗಾಗಲೇ ಇರುವ ಮಕ್ಕಳ ಪೌಷ್ಟಿಕ ಆಹಾರದ ಕೊರತೆ, ಬಾಲ ಕಾರ್ಮಿಕರು, ಮಕ್ಕಳ ಶೋಷಣೆ, ಬಾಲ್ಯ ವಿವಾಹ ಮತ್ತು ಮಾನಸಿಕ ಕಾಯಿಲೆಯಂತಹ ಸಮಸ್ಯೆಗಳನ್ನು ಕೊರೋನ ಸಾಂಕ್ರಾಮಿಕ ಇನ್ನಷ್ಟು ತೀವ್ರವಾಗಿಸಿದೆ. ಹೀಗಿರುವಾಗ ಲಾಕ್‌ಡೌನ್ ಮತ್ತು ಆ ನಂತರದ ಅವಧಿಯಲ್ಲಿ ಮಕ್ಕಳ ಹಕ್ಕುಗಳ ಬೇಕಾಬಿಟ್ಟಿ ಉಲ್ಲಂಘನೆಯ ಕುರಿತು ಎನ್‌ಸಿಪಿಸಿಆರ್ ಹೆಚ್ಚಿನ ಕಾಳಜಿ ತೋರಬೇಕಾಗಿತ್ತು. ಮಕ್ಕಳಿಗೆ ಸಂಬಂಧಿಸಿದ ಎಲ್ಲ ಸಂಸ್ಥೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಅದು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಸಿಸಿಐಗಳ ಚಟುವಟಿಕೆಗಳ ಮೇಲೆ ಕಣ್ಣಿಡುವುದು ಮತ್ತು ಅವುಗಳಲ್ಲಿ ಸುಧಾರಣೆಗಳನ್ನು ತರುವುದು ನಿಸ್ಸಂಶಯವಾಗಿಯೂ ಅಗತ್ಯ. ಈ ಸುಧಾರಣೆಗಳನ್ನು ಅನುಷ್ಠಾನಗೊಳಿಸಲು ಅವಶ್ಯಕವಾದ ಬೆಂಬಲ ನೀಡುವ ನಿಟ್ಟಿನಲ್ಲಿ ಆಯೋಗವು ಮುಂಚೂಣಿಯಲ್ಲಿರಬೇಕು. ಆದರೆ ಸದ್ಯಕ್ಕೆ ಆಯೋಗಕ್ಕೆ ಮಕ್ಕಳ ಮೇಲಿನ ಕಾಳಜಿಗಿಂತ, ಸರಕಾರದ ಕುರಿತ ಕಾಳಜಿಯೇ ಹೆಚ್ಚಾದಂತೆ ಕಾಣುತ್ತದೆ. ಮಕ್ಕಳ ಆರೈಕೆ ಸಂಸ್ಥೆಗಳನ್ನು ಸುಭದ್ರಗೊಳಿಸುವ ಬದಲು, ಇನ್ನಷ್ಟು ದುರ್ಬಲಗೊಳಿಸುವ ಮೂಲಕ ಆಯೋಗ ಮಕ್ಕಳನ್ನು ಹಕ್ಕನ್ನು ರಕ್ಷಿಸಲು ಹೊರಟಿರುವುದು ವಿಪರ್ಯಾಸ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News