ಪ್ರಕಟಣೆಗಾಗಿ ಅಪ್ರಕಟಿತ ಕೃತಿಗಳ ಆಹ್ವಾನ
ಬಳ್ಳಾರಿ, ಅ.19: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಮುಕ್ತ ಪ್ರಕಟಣೆ ಮಾಲೆ ಹೆಸರಿನಲ್ಲಿ ಅಪ್ರಕಟಿತ ಕೃತಿಗಳನ್ನು ಪ್ರಕಟಣೆಗಾಗಿ ಆಹ್ವಾನಿಸಿದೆ ಎಂದು ಕನ್ನಡ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ತಿಳಿಸಿದ್ದಾರೆ.
ಲೇಖಕರು ಯಾವುದೇ ವಿಷಯಕ್ಕೆ ಸಂಬಂಧಿಸಿದ ಸಂಶೋಧನೆ, ವಿಮರ್ಶೆ, ಜೀವನಚರಿತ್ರೆ, ಆತ್ಮಕಥೆ, ನಿಘಂಟು ಈವರೆಗೆ ಬರದೇ ಇರುವ ಜ್ಞಾನಶಾಖೆಯ ಬಗ್ಗೆ ಪ್ರಕಟವಾಗಬಹುದಾದ ಜ್ಞಾನನಿಧಿ ಎನಿಸಬಹುದಾದ ಶಾಸ್ತ್ರ ಜ್ಞಾನ ಹೆಚ್ಚಿಸುವ ವಿಶೇಷ ಕೃತಿಗಳ ಪ್ರಕಟಣೆಗೆ ಸಿದ್ಧವಿದ್ದಲ್ಲಿ ತಮ್ಮ ಕೃತಿಗಳನ್ನು ಅಕಾಡೆಮಿಯ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ.
ಯಾವುದೇ ವಿಷಯಕ್ಕೆ ಸಂಬಂಧಿಸಿದ ಕೃತಿಯಾದರೂ ಇದು ಅಖಂಡ ಒಂದೇ ವಿಷಯ ವಸ್ತುವಿಗೆ ಸಂಬಂಧಿಸಿದ ಕೃತಿಯಾಗಿರಬೇಕಲ್ಲದೆ ಲೇಖನಗಳ ಸಂಗ್ರಹವಾಗಬಾರದು. ಪ್ರಕಟಣೆಗೆ ಸಲ್ಲಿಸುವ ಕೃತಿಯು ಬಿಡಿ ಭಾಗವಾಗಲಿ ಅಥವಾ ಇಡಿಯಾಗಲಿ ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು.
ಪ್ರಕಟಣೆಗೆ ಸಲ್ಲಿಸುವ ಕೃತಿ ಡೆಮಿ 1/8 ಆಕಾರದಲ್ಲಿ ಪೇಜ್‍ಮೇಕರ್‍ಗೆ ಅಳವಡಿಸಿರಬೇಕು. ನುಡಿ ಅಕ್ಷರ ಗಾತ್ರ–1 ಒಂದು ಸಾಲಿನ ಅಂತರದಲ್ಲಿ (Single Space) ಸಂಯೋಜಿಸಿದ 100 ಪುಟಗಳಿಂದ 300 ಪುಟಗಳವರೆಗೆ ವ್ಯಾಪ್ತಿ ಇರಬೇಕು. ಪ್ರಕಟವಾಗುವ ಕೃತಿಯ ಮುಖಬೆಲೆ ಶೇ.10%ರಷ್ಟು ಗೌರವ ಸಂಭಾವನೆ ಮತ್ತು 1000 ಪ್ರತಿಗಳಿಗೆ 25 ಗೌರವ ಪ್ರತಿಗಳನ್ನು ನೀಡಲಾಗುವುದು.
ಆಸಕ್ತರು, ಲೇಖಕರು ನ.16ರೊಳಗಾಗಿ ತಮ್ಮ ಕೃತಿಯನ್ನು ಪ್ರಕಟಣೆಯ ಆಯ್ಕೆಗೆ ಸಾದರಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‍ಸೈಟ್ www.karnatakasahithyaacademy.org ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.