×
Ad

ಕಪಾಲ ಬೆಟ್ಟದಲ್ಲಿ ಕಾಮಗಾರಿ ನಡೆಸದಂತೆ ಹೈಕೋರ್ಟ್ ನಿರ್ದೇಶನ

Update: 2020-10-19 23:27 IST

ಬೆಂಗಳೂರು, ಅ.19: ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಪಾಲ ಬೆಟ್ಟದಲ್ಲಿ ಚರ್ಚ್ ನಿರ್ಮಿಸಲು 10 ಎಕರೆ ಭೂಮಿಯನ್ನು ಮಂಜೂರು ಮಾಡಿದ ಸರಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಈ ಭೂಮಿಯಲ್ಲಿ ನ್ಯಾಯಾಲಯದ ಅನುಮತಿ ಇಲ್ಲದೇ ಯಾವುದೇ ಕಾಮಗಾರಿ ಕೈಗೆತ್ತಿಗೊಳ್ಳಬಾರದು ಎಂದು ಹೈಕೋರ್ಟ್ ಹಾರೋಬೆಲೆ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್‍ಗೆ ನಿರ್ದೇಶಿಸಿದೆ.

ಹಾರೋಬೆಲೆ ಗ್ರಾಮದ ನಿವಾಸಿಗಳಾದ ಆಂಥೋಣಿ ಸ್ವಾಮಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಕೆಲ ಕಾಲ ವಾದ ಆಲಿಸಿದ ಪೀಠ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಮನಗರ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ಹಾರೋಬೆಲೆ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್‍ಗೆ ನೋಟಿಸ್ ಜಾರಿಗೆ ಆದೇಶಿಸಿತು. ಹಾಗೆಯೇ, ನ್ಯಾಯಾಲಯದ ಅನುಮತಿ ಇಲ್ಲದೆ ಕಪಾಲಬೆಟ್ಟದಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದಿಸಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಬರೆದ ಪತ್ರ ಆಧರಿಸಿ 10 ಎಕರೆ ಸರಕಾರಿ ಜಮೀನನ್ನು ಖಾಸಗಿ ಟ್ರಸ್ಟ್‍ಗೆ ಮಂಜೂರು ಮಾಡಲಾಗಿದೆ. ವಾಸ್ತವದಲ್ಲಿ ಯಾವುದೇ ಕ್ರೈಸ್ತ ಧರ್ಮೀಯರು ಜಾಗ ಮಂಜೂರು ಮಾಡುವಂತೆ ಮನವಿ ಸಲ್ಲಿಸಿಲ್ಲ. ಡಿಕೆ ಸಹೋದರರು ತಮ್ಮ ಸ್ವಹಿತಾಸಕ್ತಿ, ರಾಜಕೀಯ ಸ್ವಾರ್ಥ ಮತ್ತು ಮತಬ್ಯಾಂಕ್‍ಗಾಗಿ ಟ್ರಸ್ಟ್‍ಗೆ ಜಮೀನು ಮಂಜೂರು ಮಾಡಲು ರಾಮನಗರದ ಜಿಲ್ಲಾಧಿಕಾರಿಗೆ 2017ರಲ್ಲಿ ಪತ್ರ ಬರೆದಿದ್ದಾರೆ. ಮುಂದಿನ ಡಿಸೆಂಬರ್ 25ರಂದು ಬೆಟ್ಟದಲ್ಲಿ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ. ಹೀಗಾಗಿ, ಚರ್ಚ್ ನಿರ್ಮಾಣ ಕಾಮಗಾರಿಗೆ ತಡೆ ನೀಡಬೇಕು ಎಂದು ಕೋರಿದರು.

ಏನಿದು ಪ್ರಕರಣ: ಕನಕಪುರ ತಾಲೂಕಿನ ನಲ್ಲಹಳ್ಳಿ ಗ್ರಾಮದ ಸರ್ವೇ ನಂಬರ್ 283ರ ಕಪಾಲ ಬೆಟ್ಟದಲ್ಲಿನ 10 ಎಕರೆ ಭೂಮಿಯನ್ನು ಚರ್ಚ್ ನಿರ್ಮಾಣ ಹಾಗೂ ಕ್ರೈಸ್ತ ಧರ್ಮದ ಚಟುವಟಿಕೆಗಳಿಗೆ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್‍ಗೆ ಮಂಜೂರು ಮಾಡಲಾಗಿದೆ. ಸರಕಾರದ ಈ ಕ್ರಮವನ್ನು ಪ್ರಶ್ನಿಸಿರುವ ಅರ್ಜಿದಾರರು, ಹುಲ್ಲುಗಾವಲು ಪ್ರದೇಶವಾಗಿರುವ ಕಪಾಲಬೆಟ್ಟವನ್ನು ಜಾನುವಾರುಗಳ ಮೇವಿಗೆ ಮೀಸಲಿಡಲಾಗಿದೆ. ಸರಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳ ಲಾಭಕ್ಕಾಗಿ ಅಥವಾ ಯಾವುದೇ ಧಾರ್ಮಿಕ ಚಟುವಟಿಕೆಗೆ ನೀಡಬಾರದು ಎಂದು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‍ಗಳು ಆದೇಶಿಸಿವೆ. ಹೀಗಿದ್ದರೂ, ಖಾಸಗಿಯವರಿಗೆ ಜಮೀನು ಮಂಜೂರು ಮಾಡಲಾಗಿದೆ. ಹೀಗಾಗಿ, ಟ್ರಸ್ಟ್‍ಗೆ ಜಮೀನು ಮಂಜೂರು ಮಾಡಿರುವ ಸರಕಾರದ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News