ರಾಜ್ಯದ 25 ಬಿಜೆಪಿ ಸಂಸದರು ನರ ಸತ್ತವರು: ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ

Update: 2020-10-20 15:58 GMT

ಮೈಸೂರು,ಅ.20: ಕೇಂದ್ರದಿಂದ ಬರಬೇಕಿರುವ ಹಣವನ್ನು ಕೊಡಿ ಎಂದು ತೊಡೆತಟ್ಟಿ ಕೇಳುವ ಶಕ್ತಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗಿಲ್ಲ, ಇನ್ನು ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ 25 ಮಂದಿ ಬಿಜೆಪಿಯವರು ನರಸತ್ತ ಸಂಸದರು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಂಗಳವಾರ ಏಷ್ಯನ್ ಬಣ್ಣದ ಕಾರ್ಖಾನೆಗೆ ಭೂಮಿ ನೀಡಿದ ರೈತ ಕುಟುಂಬಕ್ಕೆ ಕಾರ್ಖಾನೆಯಲ್ಲಿ ಉದ್ಯೋಗ ನೀಡುವಂತೆ ಆಗ್ರಹಿಸಿ ಹಾಗೂ ಪ್ರವಾಹ, ಬೆಂಬಲ ಬೆಲೆ ಕುರಿತಂತೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕೇಂದ್ರದಿಂದ ಬರಬೇಕಿರುವ ಹಣವನ್ನು ಕೊಡಿ ಎಂದು ತೊಡೆ ತಟ್ಟಿ ಕೇಳುವ ಶಕ್ತಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗಿಲ್ಲ. ಇನ್ನು ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಪರಿಹಾರದ ಹಣ ಕೇಳುವುದಿರಲಿ ಪ್ರಧಾನಿಯನ್ನು ಭೇಟಿ ಮಾಡುವ ಧೈರ್ಯವನ್ನೂ ಹೊಂದಿಲ್ಲದ ನರಸತ್ತ ಸಂಸದರು ಎಂದು ಕಿಡಿಕಾರಿದರು.

ರಾಜ್ಯದ ಅನೇಕ ಭಾಗಗಳು ಬರ ನೆರೆಯಿಂದ ತತ್ತರಿಸಿವೆ. ಅಲ್ಲಿಗೆ ನೀಡಬೇಕಾದ ಪರಿಹಾರದ ಮೊತ್ತವನ್ನು ನೀಡುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಸತತವಾಗಿ ಮೂರು ವರ್ಷಗಳಿಂದ ಪ್ರವಾಹ ಉಂಟಾಗುತ್ತಿದೆ. ಅಲ್ಲಿನ ಜನರು ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅವರ ಬಗ್ಗೆ ಕಾಳಜಿ ಇರಬೇಕಾದ ಸರ್ಕಾರ ಜನರಿಗೆ ಮಂಕುಬೂದಿ ಎರಚುತ್ತಿದೆ ಎಂದು ಹೇಳಿದರು.

ಉತ್ತರ ಕರ್ನಾಟಕದಲ್ಲಿನ ಪರಿಸ್ಥಿತಿ ನೋಡಿದರೆ ಕರುಳು ಹಿಂಡಿಬರುತ್ತದೆ. ಅಲ್ಲಿನ ಜನರಿಗೆ ಸೂಕ್ತ ಸೌಲಭ್ಯ ನೀಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫಲವಾಗಿವೆ ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ಕಳೆದ ಬಾರಿ ಪ್ರವಾಹ ಆದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 5 ಲಕ್ಷ ರೂ. ಕೊಡುವುದಾಗಿ ಹೇಳಿದ್ದರು. ಜೊತೆಗೆ ಅವರಿಗೆ ಮನೆಗಳನ್ನು ಕಟ್ಟಿಸಿಕೊಡುವ ಭರವಸೆಯನ್ನು ನೀಡಿದ್ದರು. ಆದರೆ ಇದುವರೆಗೂ ಮಾಡಿಲ್ಲ. ಯಡಿಯೂರಪ್ಪ ಸುಳ್ಳುಗಳನ್ನೇ ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಟೀಕಿಸಿದರು.

ರೈತರ ಮಗ ಎಂದು ಹೇಳುವ ಯಡಿಯೂರಪ್ಪನವರಿಗೆ ರೈತರ ಕಷ್ಟ ಅರ್ಥವಾಗುತ್ತಿಲ್ಲ. ಇವರಿಗೆ ಕಷ್ಟಗೊತ್ತಿದ್ದರೆ ಪರಿಹಾರದ ಹಣ ನೀಡದೆ ಇರುತ್ತಿರಲಿಲ್ಲ, ರಾಜ್ಯಕ್ಕೆ ಬರಬೇಕಿರುವ ಹಣವನ್ನು ಕೊಡುವಂತೆ ತೊಡೆ ತಟ್ಟಿ ಕೇಳುವ ಧೈರ್ಯ ಇಲ್ಲ. ಕಾಡಿ ಬೇಡಿ ಮುಖ್ಯಮಂತ್ರಿಯಾಗಿದ್ದಾರೆ. ಬಂಡವಾಳ ಹಾಕಿ ಸರ್ಕಾರ ರಚನೆ ಮಾಡಿದ್ದಾರೆ. ಹಾಗಾಗಿ ಇವರಿಗೆ ಕೇಂದ್ರ ಸರ್ಕಾರವನ್ನು ಕೇಳುವ ಧೈರ್ಯ ಇಲ್ಲ. ಇದ್ದಷ್ಟು ದಿನ ಖರ್ಚು ಮಾಡಿರುವ ಹಣವನ್ನು ಪಡೆದು ಮನೆಗೆ ಹೋಗಬೇಕು ಎಂಬ ತೀರ್ಮಾನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರ ಬದುಕನ್ನು ನಾಶಮಾಡಲು ಹೊರಟಿದ್ದಾರೆ. ಮನ್‍ಕಿ ಬಾತ್ ನಲ್ಲಿ ಗಂಟೆ ಗಟ್ಟಲೆ ಇವರು ರೈತರ ಸ್ವಾವಲಂಭನೆ ಬಗ್ಗೆ ಮಾತನಾಡುವುದಿಲ್ಲ. 18 ಬೆಳಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ. ಅವುಗಳು ಕಾರ್ಯರೂಪಕ್ಕೆ ಬಂದಿವೆಯೇ ಎಂದು ಪ್ರಶ್ನಿಸಿದರು.

ರೈತ ಮುಖಂಡ ಹೊಸಕೋಟೆ ಬಸವರಾಜು ಮಾತನಾಡಿ, ನಂಜನಗೂಡು ತಾಲೂಕು ತಾಂಡ್ಯಾ ಕೈಗಾರಿಕಾ ಪ್ರದೇಶದಲ್ಲಿರುವ ಏಷ್ಯನ್ ಪೇಂಟ್ಸ್ ಕಾರ್ಖಾನೆಗೆ ಅಲ್ಲಿನ ರೈತರು ಭೂಮಿಯನ್ನು ನೀಡಿದ್ದಾರೆ. ಅವರು ಭೂಮಿ ನೀಡುವ ವೇಳೆ ಭೂಮಿ ನೀಡುವ ರೈತರಿಗೆ ಉದ್ಯೋಗ ನೀಡಬೇಕು ಎಂಬ ಶರತ್ತನ್ನು ವಿಧಿಸಲಾಗಿತ್ತು. ಆದರೆ ಈವರೆಗೆ ಕಾರ್ಖಾನೆ ಆಡಳಿತ ಮಂಡಳಿ ಉದ್ಯೋಗ ನೀಡಿಲ್ಲ, ಇದನ್ನು ಕೇಳಲು ಹೋದರೆ ಇಂದು ನಾಳೆ ಎಂದು ಸತಾಯಿಸಿಕೊಂಡು ಬರಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ರೈತರ ಕಷ್ಟಗೊತ್ತಿಲ್ಲ. ಹಾಗಾಗಿ ಮಲತಾಯಿ ಧೋರಣೆ ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರುಗಳಾದ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಶಟ್ಟಹಳ್ಳಿ ಚಂದ್ರೇಗೌಡ, ಬೊಕ್ಕಳ್ಳಿ ನಂಜುಂಡಸ್ವಾಮಿ, ಸ್ವರಾಜ್ ಇಂಡಿಯಾದ ನಗರ ಘಟಕದ ಅಧ್ಯಕ್ಷ ಉಗ್ರ ನರಸಿಂಹೇಗೌಡ, ಕಾರ್ಮಿಕ ಮುಖಂಡ ಚಂದ್ರಶೇಖರ್ ಮೇಟಿ, ಪ್ರಸನ್ನ ಗೌಡ, ಕುಮಾರ್, ಮಹದೇವೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪೊಲೀಸ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಬಡಗಲಪುರ ನಾಗೇಂದ್ರ

''ರೀ ಮಿಸ್ಟರ್ ನಾವು ನಿಮ್ಮಿಂದ ಬುದ್ಧಿ ಕಲಿಬೇಕಿಲ್ಲ, ನೀವು ಈವತ್ತು ಮೈಸೂರಿಗೆ ಬಂದಿದ್ದೀರಿ. ನಾವು 40 ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ನಿಮ್ಮ ಉಪದೇಶ ನಮಗೆ ಬೇಕಿಲ್ಲ. ಇಲ್ಲಿಂದ ಹೊರ ನಡೆಯಿರಿ ಎಂದು ಪೊಲೀಸ್ ಅಧಿಕಾರಿಯನ್ನು ಬಡಗಲಪುರ ನಾಗೇಂದ್ರ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ರೈತ ಸಂಘ ನಡೆಸುತ್ತಿದ್ದ ಪ್ರತಿಭಟನೆ ರೈತ ಮುಖಂಡರುಗಳು ಮೈಕಾ ಫೋನ್ ಬಳಸಿ ಮಾತನಾಡಲು ಮುಂದಾದರು. ಈ ವೇಳೆ ಮೈಕ್ ಬಳಸದಂತೆ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರೊಬ್ಬರು ರೈತರಿಗೆ ಸೂಚಿಸುತ್ತಿದ್ದಂತೆ ಪೊಲೀಸ್ ಅಧಿಕಾರಿಯ ವಿರುದ್ಧ ರೈತ ಮುಖಂಡರು ತಿರುಗಿ ಬಿದ್ದರು.

ಇದೇ ವೇಳೆ ಮಾತನಾಡಿದ ಬಡಗಲಪುರ ನಾಗೇಂದ್ರ, ಕಳೆದ 40 ವರ್ಷಗಳಿಂದ ನಾವು ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಪೊಲೀಸರು ಮತ್ತು ರೈತರ ನಡುವೆ ಉತ್ತಮ ಬಾಂಧ್ಯವ ಇದೆ. ನಿಮ್ಮಂತಹ ಒಬ್ಬ ಪೊಲೀಸ್ ಅಧಿಕಾರಿಯಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ನಾವು ಮೈಕ್ ಬಳಸುತ್ತಿಲ್ಲ, ಮೈಕಾ ಫೋನ್ ಬಳಸುತ್ತಿದ್ದೇವೆ. ನಿಮ್ಮನ್ನು ಕೇಳಿ ನಾವು ಪ್ರತಿಭಟನೆ ಮಾಡಬೇಕಿಲ್ಲ. ನಮ್ಮ ಹಕ್ಕು ಹಾಗಾಗಿ ನಾವು ಹೋರಾಟ ಮಾಡುತ್ತೇವೆ. ಇದನ್ನು ತಡೆಯುವ ಶಕ್ತಿ ಪ್ರಧಾನಿಗೂ ಇಲ್ಲ, ಮುಖ್ಯಮಂತ್ರಿಗೂ ಇಲ್ಲ ಎಂದು ಆಕ್ರೋಶ ಭರಿತರಾದರು.

ಇಲ್ಲಿ ಹೋರಾಟ ಮಾಡುತ್ತಿರುವವರು ವಿದ್ಯಾವಂತರು, ವಕೀಲರು ಮತ್ತು  ಕಾನೂನು ಅರಿವಿರುವವರು. ನೀವು ಕಾನೂನಿನ ಪ್ರಕಾರವೇ ಕೆಲಸ ಮಾಡುವುದಾದರೆ, ದಸರಾ ಉದ್ಘಾಟನೆ ವೇಳೆ 200 ಜನರಿಗೆ ಅವಕಾಶ ನೀಡಲಾಗಿತ್ತು. ಅಲ್ಲಿ ಸಾವಿರಾರು ಜನ ಸೇರಿದ್ದರು. ಏಕೆ ನೀವು ಅವರ ಮೇಲೆ ಪ್ರಕರಣ ದಾಖಲಿಸಲಿಲ್ಲ? ರೈತರು ತಮ್ಮ ಹಕ್ಕಿಗಾಗಿ ಹೋರಾಟ ಮಾಡಲು ಬಂದರೆ ಬೆದರಿಸುವ ಕೆಲಸ ಮಾಡುತ್ತೀರಾ. ನಿಮ್ಮ ಗೊಡ್ಡು ಬೆದರಿಕೆಗೆ ಹೆದರುವವರು ನಾವಲ್ಲ ಎಂದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ದೇವರಾಜ ಎಸಿಪಿ ಶಶಿಧರ್ ಅವರು ರೈತ ಮುಖಂಡರುಗಳನ್ನು ಸಮಾಧಾನ ಪಡಿಸಿ ಪೊಲೀಸ್ ಅಧಿಕಾರಿಯನ್ನು ಸ್ಥಳದಿಂದ ಹೊರ ಕಳುಹಿಸಿದರು. 

ಸಂವಿಧಾನಕ್ಕೆ ಗೌರವ ನೀಡದೆ ಕಸದ ಬುಟ್ಟಿಗೆ ಎಸೆಯುವ ಬಿಜೆಪಿ ಸರ್ಕಾರ ಇನ್ನು ವಿರೋಧ ಪಕ್ಷದ ನಾಯಕರು, ರೈತರ ಮಾತಿಗೆ ಮರ್ಯಾದೆ ನೀಡುತ್ತದೆಯೇ?
 -ಬಡಗಲಪುರ ನಾಗೇಂದ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News