ಜನತೆಗೆ ಪಾಠ ಮಾಡುವ ಮೊದಲು ಪ್ರಧಾನಿ ತನ್ನ ಕರ್ತವ್ಯದ ಬಗ್ಗೆ ಆತ್ಮಾವಲೋಕನ ಮಾಡಲಿ: ಸಿದ್ದರಾಮಯ್ಯ

Update: 2020-10-20 16:13 GMT

ಬೆಂಗಳೂರು, ಅ.20: ದೇಶವನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡಿರುವ ಭಾಷಣಕ್ಕೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜನತೆಗೆ ಕರ್ತವ್ಯ ಪಾಲನೆಯ ಪಾಠ ಮಾಡುವ ಮೊದಲು ಪ್ರಧಾನಿ ತನ್ನ ಕರ್ತವ್ಯಪಾಲನೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿತ್ತು ಎಂದು ತಿಳಿಸಿದ್ದಾರೆ.

ಕೊರೋನ ಸೋಂಕಿನ ನಿಯಂತ್ರಣ ಮತ್ತು ಅದರಿಂದಾಗಿ ಕಷ್ಟ-ನಷ್ಟಕ್ಕೀಡಾಗಿರುವ ಜನತೆಗೆ ಪರಿಹಾರ ನೀಡಲು ಕೇಂದ್ರ ಸರಕಾರ ಏನು ಮಾಡಿದೆ ಮತ್ತು ಮುಂದಿನ ದಿನಗಳಲ್ಲಿ ಏನು ಮಾಡಲಿದೆ ಎನ್ನುವುದನ್ನು ದೇಶದ ಜನತೆಗೆ ತಿಳಿಸಬೇಕಾಗಿತ್ತು. ದೇಶದ ಜನತೆಗೆ ಬುದ್ದಿವಾದ ಹೇಳುವ ಮೂಲಕ ಪ್ರಧಾನಿ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವ ಹತಾಶ ಪ್ರಯತ್ನವನ್ನಷ್ಟೇ ಮಾಡಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಕೊರೋನ ಸೋಂಕು ಉಲ್ಬಣಕ್ಕೆ ಜನರ ನಿರ್ಲಕ್ಷಕ್ಕಿಂತಲೂ ಕೇಂದ್ರ ಮತ್ತು ರಾಜ್ಯ ಸರಕಾರಗಳ ಹೊಣೆಗೇಡಿತನವೂ ಕಾರಣ ಎನ್ನುವುದನ್ನು ಪ್ರಧಾನಿ ಒಪ್ಪಿಕೊಂಡು ದೇಶದ ಜನತೆಯಲ್ಲಿ ಕ್ಷಮೆ ಯಾಚಿಸಬೇಕಾಗಿತ್ತು. ಜಾಗಟೆ ಬಾರಿಸಿ, ದೀಪ ಹಚ್ಚಿ ಕೊರೋನ ಎದುರಿಸಲು ಕರೆ ನೀಡಿದ ಪ್ರಧಾನಿಯ ಮೂಢತನದ ಭಾಷಣಗಳೇ ಕೊರೋನ ಸೋಂಕಿನ ಬಗ್ಗೆ ಜನರ ನಿರ್ಲಕ್ಷಕ್ಕೆ ಮುಖ್ಯ ಕಾರಣ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ರೋಗವನ್ನು ವೈಜ್ಞಾನಿಕವಾಗಿ ಎದುರಿಸಲು ಕರೆ ನೀಡಬೇಕಾದ ಪ್ರಧಾನಿ, ಟಿವಿ ಜ್ಯೋತಿಷಿಗಳ ರೀತಿಯಲ್ಲಿ ಪ್ರವಚನ ನೀಡಿದರೆ ಜನ ಮೂಢಮತಿಗಳಾಗದೆ ಇನ್ನೇನು ಆಗಲು ಸಾಧ್ಯ? ದೇಶದ ಜನತೆಗೆ ಕರ್ತವ್ಯ ಪಾಲನೆಯ ಪ್ರವಚನ ನೀಡಿದ ಪ್ರಧಾನಿ ಅದರ ಜೊತೆಗೆ ಕೊರೋನ ಪರಿಹಾರದ ಇಪ್ಪತ್ತು ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಏನಾಯಿತು? ಯಾರಿಗೆ? ಎಷ್ಟು ತಲುಪಿದೆ? ಪಿ.ಎಂ. ಕೇರ್ಸ್ ನಿಧಿಗೆ ಬಂದ ದುಡ್ಡೆಷ್ಟು? ಕೊರೋನ ನಿಯಂತ್ರಣ ಮತ್ತು ಪರಿಹಾರಕ್ಕಾಗಿ ಆ ನಿಧಿಯಿಂದ ಬಳಕೆಯಾದ ದುಡ್ಡಿನ ಮೊತ್ತವೆಷ್ಟು? ಎಂಬುದನ್ನೂ ತಿಳಿಸಬೇಕಿತ್ತು ಎಂದು ಅವರು ತಿಳಿಸಿದ್ದಾರೆ.

ಕೊರೋನ ಸೋಂಕು ಪ್ರಾರಂಭಗೊಂಡಾಗ ಪ್ರಧಾನಿಯವರು ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ’ಯನ್ನು ಜೂನ್‍ನಲ್ಲಿ ಪ್ರಕಟಿಸಿದ್ದರು. ಅದು ಎಷ್ಟು ಜನರಿಗೆ ತಲುಪಿದೆ? ರಾಜ್ಯದ ಬಿಜೆಪಿ ಸರಕಾರ ಅನ್ನಭಾಗ್ಯದಲ್ಲಿ ನೀಡಲಾಗುತ್ತಿದ್ದ ಅಕ್ಕಿಯನ್ನು ಹತ್ತರಿಂದ ಏಳು ಕಿಲೋಗೆ ಇಳಿಸಿದೆ, ಇಂದಿರಾ ಕ್ಯಾಂಟೀನ್‍ಗಳನ್ನು ಮುಚ್ಚಲು ಹೊರಟಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಿತವ್ಯಯ ಪಾಲನೆ ಮಾಡಿ ಲಭ್ಯ ಇರುವ ಸಂಪನ್ಮೂಲವನ್ನು ಕೊರೋನ ನಿಯಂತ್ರಣಕ್ಕಾಗಿ ಬಳಸಬೇಕಾದ ರಾಜ್ಯದ ಬಿಜೆಪಿ ಸರಕಾರ ಕೊರೋನ ಕಾಯಿಲೆಯ ಪರಿಹಾರದ ನೆಪದಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದೆ. ಇದೇನಾದರೂ ಪ್ರಧಾನಿಯ ಗಮನಕ್ಕೆ ಬಂದಿದೆಯೇ? ಎಂದು ಸಿದ್ದರಾಮಯ್ಯ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News