ರಾಜ್ಯವು ಮುಂಚೂಣಿ ಹೋರಾಟಗಾರನನ್ನು ಕಳೆದುಕೊಂಡಿದೆ: ಮಾರುತಿ ಮಾನ್ಪಡೆ ನಿಧನಕ್ಕೆ ಸಿಪಿಎಂ ಸಂತಾಪ

Update: 2020-10-20 16:55 GMT

ಬೆಂಗಳೂರು, ಅ.20: ರೈತ, ಕಾರ್ಮಿಕ ನಾಯಕ ಮಾರುತಿ ಮಾನ್ಪಡೆ ನಿಧನದಿಂದಾಗಿ ರಾಜ್ಯವು ಮುಂಚೂಣಿ ಹೋರಾಟಗಾರರೊಬ್ಬರನ್ನು ಕಳೆದುಕೊಂಡಿದೆ ಎಂದು ಸಿಪಿಎಂ ರಾಜ್ಯ ಸಮಿತಿ ಶ್ರದ್ಧಾಂಜಲಿ ಸಲ್ಲಿಸಿದೆ.

ಕೋವಿಡ್‍ನಿಂದ ಮೃತಪಟ್ಟ ಮಾರುತಿ ಮಾನ್ಪಡೆ, ಕಳೆದ ಸೆ.20ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ರೈತ, ದಲಿತ ಕಾರ್ಮಿಕರ ಐಕ್ಯ ಹೋರಾಟದ ನಾಯಕರಾಗಿದ್ದ ಅವರು, ರೈತ ಚಳವಳಿಯ ಎಲ್ಲ ಬಣಗಳನ್ನು ಒಟ್ಟುಗೂಡಿಸಿ ಸೆ.25ರ ರಾಜ್ಯವ್ಯಾಪಿ ರಸ್ತೆ ತಡೆ ಮತ್ತು ಸೆ.28ರ ಬಂದ್ ಯಶಸ್ವಿಗೊಳಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಸೆ.26ರವರೆಗೆ ಬೆಂಗಳೂರಿನಲ್ಲಿದ್ದ ಅವರು, ಅ.28ರ ಬಂದ್ ಹಿನ್ನೆಲೆಯಲ್ಲಿ ಕಲಬುರಗಿಗೆ ಹಿಂದಿರುಗಿದ ನಂತರದ ದಿನಗಳಲ್ಲಿ ಅನಾರೋಗ್ಯಕ್ಕೆ ಈಡಾಗಿದ್ದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಲವು ರೈತ-ಕಾರ್ಮಿಕ ಪರ ಹೋರಾಟಕ್ಕೆ ನೇತೃತ್ವ ನೀಡಿದ್ದ ಅವರು, ಆ ಭಾಗದ ಪ್ರಗತಿಪರ ಚಳವಳಿಯ ಮುಂಚೂಣಿ ನಾಯಕರಾಗಿದ್ದರು. ತೊಗರಿ ಮಂಡಳಿ ರಚನೆಗಾಗಿ ನಡೆದ ಹೋರಾಟ, ಕಲ್ಯಾಣ ಕರ್ನಾಟಕದ ಜಿಲ್ಲೆಗಳ ನೀರಾವರಿ ಹೋರಾಟ, ಪಂಚಾಯತ್ ನೌಕರರಿಗೆ ಸೇವಾ ನಿಯಮಾವಳಿಗಳಿಗಾಗಿ ಹೋರಾಟ ಮತ್ತು ಕನಿಷ್ಠ ವೇತನ ನಿಗದಿ ಹೋರಾಟದೊಂದಿಗೆ ಹಾಗೂ ಕೋಮು ಸೌಹಾರ್ದತೆಗಾಗಿ ನಡೆದ ಹೋರಾಟಗಳಿಗೆ ನಾಯಕತ್ವ ನೀಡಿದ್ದರು.

ಸರಕಾರಿ ನೌಕರಿ ತ್ಯಜಿಸಿ ರೈತ ಚಳವಳಿಗೆ ಪೂರ್ಣಾವಧಿ ಕಾರ್ಯಕರ್ತರಾಗಿ ತಮ್ಮನ್ನು ತೊಡಗಿಸಿಕೊಂಡ ಅವರು, 1986ರಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಆ ನಂತರ ವಿಧಾನಸಭಾ ಚುನಾವಣೆಗಳಲ್ಲಿ ಕಲಬುರಗಿಯ ಕಮಲಪುರ ಕ್ಷೇತ್ರದಿಂದ ಸಿಪಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

1995ರಲ್ಲಿ ಬಿಜಾಪುರದಲ್ಲಿ ನಡೆದ ಕರ್ನಾಟಕ ಪ್ರಾಂತ ರೈತ ಸಂಘದ ಸಮ್ಮೇಳನದಲ್ಲಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಅವರು, ಈಗ ಹಾಲಿ ಉಪಾಧ್ಯಕ್ಷರಾಗಿದ್ದರು. 1989ರಿಂದಲೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಇಂದಿನವರೆಗೂ ಗ್ರಾಮ ಪಂಚಾಯತ್ ನೌಕರರ ಚಳವಳಿಯನ್ನು ಮುನ್ನಡೆಸಿದ್ದರೆಂದು ಸಿಪಿಎಂ ರಾಜ್ಯ ಸಮಿತಿ ಪ್ರಕಟನೆಯ ಮೂಲಕ ಸಂತಾಪ ಸೂಚಿಸಿದೆ.

ನಾಳೆ ಅಂತ್ಯಸಂಸ್ಕಾರ

ಹಿರಿಯ ರೈತ ನಾಯಕ ಮಾರುತಿ ಮಾನ್ಪಡೆರವರ ಅಂತ್ಯ ಸಂಸ್ಕಾರ ಅ.21(ನಾಳೆ) ಕಲಬುರಗಿಯ ಲೆಂಗಟಿ ಗ್ರಾಮದಲ್ಲಿ ನಡೆಯಲಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News