ಬಿಬಿಎಂಪಿ ಚುನಾವಣೆ ವಿಳಂಬ: ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2020-10-20 17:04 GMT

ಬೆಂಗಳೂರು, ಅ.20: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ(ಬಿಬಿಎಂಪಿ) ಚುನಾವಣೆ ನಡೆಸುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಸೂಚನೆ ನೀಡಿದೆ.

ಬಿಬಿಎಂಪಿಗೆ ಶೀಘ್ರ ಚುನಾವಣೆ ನಡೆಸಬೇಕು ಎಂದು ಬಿಬಿಎಂಪಿ ಮಾಜಿ ಸದಸ್ಯರಾದ ಎಂ.ಶಿವರಾಜ್, ಅಬ್ದುಲ್ ವಾಜೀದ್ ಹಾಗೂ ಕೆಎಂಸಿ ಕಾಯ್ದೆಯ ಸರಕಾರದ ತಿದ್ದುಪಡಿ ಪರಿಗಣಿಸದಂತೆ ಕೋರಿ ಚುನಾವಣಾ ಆಯೋಗದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠ, ಆಕ್ಷೇಪಣೆಗಳಿದ್ದರೆ ಸಲ್ಲಿಸಲು ರಾಜ್ಯ ಸರಕಾರಕ್ಕೆ ಸೂಚನೆ ನೀಡಿ, ವಿಚಾರಣೆಯನ್ನು ನ.10ಕ್ಕೆ ಮುಂದೂಡಿತು.

ಚುನಾವಣೆ ಆಯೋಗದ ಪರ ವಾದಿಸಿದ ವಕೀಲ ಕೆ.ಎನ್.ಫಣೀಂದ್ರ ಅವರು, ಬಿಬಿಎಂಪಿ ವಾರ್ಡ್‍ಗಳ ಸಂಖ್ಯೆಯನ್ನು 250ಕ್ಕೆ ಹೆಚ್ಚಿಸಲು ಅವಕಾಶವಿರುವ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಸರಕಾರ ಮುಂದಾಗಿದೆ. ಇದನ್ನು ಪರಿಗಣಿಸಬಾರದೆಂದು ಮನವಿ ಮಾಡಿದರು.

ಹಾಲಿ ಇರುವ 198 ವಾರ್ಡ್ ಗಳಿಗೆ ಚುನಾವಣೆ ನಡೆಸಲು ಸೂಚನೆ ನೀಡಬೇಕು. ಈಗಾಗಲೇ 198 ವಾರ್ಡ್ ಗಳಿಗೆ ಮೀಸಲಾತಿ ಮತದಾರರ ಪಟ್ಟಿ ಸಿದ್ಧವಾಗಿದೆ. ಹೀಗಾಗಿ, ಪ್ರಸ್ತುತ ಇರುವ ವಾರ್ಡ್‍ಗಳಿಗೆ ಚುನಾವಣೆ ನಡೆಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಎಂ.ಶಿವರಾಜ್ ಪರ ವಾದಿಸಿದ ಹಿರಿಯ ನ್ಯಾಯವಾದಿ, ಮಾಜಿ ಅಡ್ವಕೇಟ್ ಜನರಲ್ ರವಿವರ್ಮಕುಮಾರ್ ಅವರು, ಬಿಬಿಎಂಪಿಗೆ ಶೀಘ್ರ ಚುನಾವಣೆ ನಡೆಸಬೇಕು ಹಾಗೂ ಹಾಲಿ ಇರುವ ವಾರ್ಡ್‍ಗಳಿಗೆ ಚುನಾವಣೆ ನಡೆಸಲು ಮನವಿ ಮಾಡಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಸರಕಾರಕ್ಕೆ ಸೂಚಿಸಿ, ವಿಚಾರಣೆಯನ್ನು ನ.10ಕ್ಕೆ ಮುಂದೂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News