ಕಲಬುರಗಿಯಲ್ಲಿ 27,278 ಜನರ ರಕ್ಷಣೆ: ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ

Update: 2020-10-20 18:17 GMT
ವಿ.ವಿ.ಜೋತ್ಸ್ನಾ

ಕಲಬುರಗಿ, ಅ.20: ಭೀಮಾ ನದಿಯ ಪ್ರವಾಹದಿಂದ ತತ್ತರಿಸಿ ಹೋಗಿರುವ ಕಲಬುರಗಿ ಜಿಲ್ಲೆಯಲ್ಲಿ ಸೋಮವಾರ ಸಂಜೆವರೆಗೆ 73 ಗ್ರಾಮಗಳ 27,278 ಜನರನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 162 ಕಾಳಜಿ ಕೇಂದ್ರಗಳನ್ನು ತೆರೆದು 28,637 ಜನರಿಗೆ ಅಲ್ಲಿ ಆಶ್ರಯ ಕಲ್ಪಿಸಿ ಅವರಿಗೆ ಊಟೋಪಚಾರದ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಸಂತ್ರಸ್ತರ ರಕ್ಷಣೆಗೆ 98 ಸದಸ್ಯರ ಆರ್ಮಿ ಸೇನಾ ಪಡೆ, 57 ಸದಸ್ಯರ 3 ಎನ್.ಡಿ.ಆರ್.ಎಫ್. ತಂಡಗಳು, 44 ಸದಸ್ಯದ ಎಸ್.ಡಿ.ಆರ್.ಎಫ್ ತಂಡ, 80 ಸದಸ್ಯರ ಅಗ್ನಿಶಾಮಕ ದಳದ ತಂಡ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಮತ್ತು ಸ್ವಯಂ ಸೇವಕರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರವಾಹಕ್ಕೆ 573 ಜಾನುವಾರುಗಳ ಜೀವ ಹಾನಿಯಾಗಿದ್ದು, ಯಾವುದೇ ಮಾನವ ಹಾನಿಯಾಗಿಲ್ಲ. 1266 ಮನೆಗಳು ಭಾಗಶಃ ಹಾನಿಗೆ ಒಳಗಾಗಿದ್ದು, 10150 ಮನೆಗಳಿಗೆ ಪ್ರವಾಹದ ನೀರು ನುಗ್ಗಿದ ಪರಿಣಾಮ ಬಟ್ಟೆ ಮತ್ತು ಪಾತ್ರೆಗಳಿಗೆ ಹಾನಿಯಾಗಿವೆ. ಭೀಕರ ಪ್ರವಾಹದಿಂದ ಹಾನಿಗೊಳಗಾದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಸಂತ್ರಸ್ತರ ನೆರವಿಗಾಗಿ ಆಂಬ್ಯುಲೆನ್ಸ್ ಸೇವೆಯನ್ನು ಸಿದ್ಧವಿಡಲಾಗಿದೆ ಎಂದು ಜ್ಯೋತ್ಸ್ನಾ ಹೇಳಿದ್ದಾರೆ.

ಹಾಗರಗುಂಡಗಿಯಲ್ಲಿ ಸೇನಾ ಪಡೆ: ಕಲಬುರಗಿ ತಾಲೂಕಿನ ಹಾಗರಗುಂಡಗಿ ಮತ್ತು ಸರಡಗಿ (ಬಿ) ಗ್ರಾಮಗಳು ನಡುಗಡ್ಡೆಯಾಗಿವೆ. ಹಾಗರಗುಂಡಗಿಯಲ್ಲಿ ಸೇನಾ ಪಡೆ ಮತ್ತು ಸರಡಗಿಯಲ್ಲಿ ಎನ್.ಡಿ.ಆರ್.ಎಫ್. ತಂಡ ಮತ್ತು ಅಗ್ನಿಶಾಮಕ ತಂಡ ಜನರನ್ನು ರಕ್ಷಿಸುವಲ್ಲಿ ತೊಡಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News