ನೆಟ್ಟಿಗರ ವ್ಯಾಪಕ ಆಕ್ರೋಶ: ಟ್ವಿಟ್ಟರ್ ಖಾತೆ ಲಾಕ್ ಮಾಡಿದ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ

Update: 2020-10-21 05:06 GMT
Photo: Twitter

ಹೊಸದಿಲ್ಲಿ: ಭಾರತದ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಮಹಾರಾಷ್ಟ್ರದಲ್ಲಿ ಮಹಿಳಾ ಸುರಕ್ಷತೆ ಮತ್ತು 'ಲವ್ ಜಿಹಾದ್' ಬಗ್ಗೆ ಚರ್ಚಿಸಲು ರಾಜ್ಯಪಾಲರನ್ನು ಭೇಟಿಯಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಶರ್ಮಾ ತಮ್ಮ ಟ್ವಿಟ್ಟರ್ ಖಾತೆಯನ್ನು ಲಾಕ್ ಮಾಡಿರುವುದು ಬೆಳಕಿಗೆ ಬಂದಿದೆ.

ಹಿಂದೂ ಯುವತಿ- ಮುಸ್ಲಿಂ ವರ ಹೀಗೆ ಅಂತರ್ ಧರ್ಮೀಯ ವಿವಾಹವನ್ನು ಹಿಂದುತ್ವ ಸಂಘಟನೆಗಳು 'ಲವ್‍ಜಿಹಾದ್' ಎಂದು ಕರೆದಿದ್ದು, ಈ ಬಗ್ಗೆ ಚರ್ಚಿಸಲು ಶರ್ಮಾ ತೆರಳಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ವಿವಾದಾತ್ಮಕ ಅಧ್ಯಕ್ಷರು ಈ ಹಿಂದೆ ಮಾಡಿದ್ದ ಸ್ತ್ರೀದ್ವೇಷದ ಮತ್ತು ಅಸಹ್ಯ ಪೋಸ್ಟ್‍ಗಳ ಬಗ್ಗೆ ಜಾಲತಾಣಿಗರು ವ್ಯಾಪಕವಾಗಿ ಖಂಡಿಸಿದ್ದರು.

ರೇಖಾ ಶರ್ಮಾ ಮತ್ತು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿರುವ ಫೋಟೊವನ್ನು ಮಹಿಳಾ ಆಯೋಗದ ಅಧಿಕೃತ ಹ್ಯಾಂಡಲ್‍ನಿಂದ ಶೇರ್ ಮಾಡಲಾಗಿದ್ದು, ಮಹಾರಾಷ್ಟ್ರದಲ್ಲಿ ನಿಷ್ಕ್ರಿಯವಾಗಿರುವ ವನ್‍ಸ್ಟಾಪ್ ಸೆಂಟರ್, ಕೋವಿಡ್-19 ಸೆಂಟರ್ ಗಳಲ್ಲಿ ಮಹಿಳಾ ರೋಗಿಗಳ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಸೇರಿದಂತೆ ಮಹಿಳಾ ಸುರಕ್ಷತೆ ಹಾಗೂ 'ಲವ್ ಜಿಹಾದ್' ಪ್ರಕರಣಗಳ ಬಗ್ಗೆ ಉಭಯ ಗಣ್ಯರು ಚರ್ಚಿಸಿದರು ಎಂದು ಶೀರ್ಷಿಕೆ ನೀಡಲಾಗಿತ್ತು.

ಇದಕ್ಕೆ ಶರ್ಮಾ ಅವರು ಕೋಮುದ್ವೇಷದ ಪದ ಬಳಸಿದ್ದಾರೆ ಎಂಬ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಹೋರಾಟಗಾರ್ತಿ ಕವಿತಾ ಕೃಷ್ಣನ್, "ರೇಖಾ ಶರ್ಮಾ ಅವರೇ ಲವ್ ಜಿಹಾದ್ ಪ್ರಕರಣ ಎಂದರೇನು? ಮುಸ್ಲಿಂ ಯುವಕ ಹಾಗೂ ಹಿಂದುಯುವತಿ ಪ್ರೇಮಿಸುವುದೇ? ಮಹಿಳೆಯರನ್ನು ಸಮುದಾಯಗಳ ಆಸ್ತಿ ಎಂದು ಪರಿಗಣಿಸುವ, ಮುಸ್ಲಿಮರನ್ನು ದ್ವೇಷಿಸುವ ನಿಮಗೆ ಅಧ್ಯಕ್ಷೆಯಾಗಿ ಮುಂದುವರಿಯುವ ನೈತಿಕತೆ ಇದೆಯೇ? ಮಹಿಳಾ ಆಯೋಗಕ್ಕೆ ನಾಚಿಕೆಗೇಡು" ಎಂದು ಪ್ರತಿಕ್ರಿಯಿಸಿದ್ದಾರೆ.

ಆರ್‍ಟಿಐ ಹೋರಾಟಗಾರ ಸಾಕೇತ್ ಗೋಖಲೆ, "ರೇಖಾ ಶರ್ಮಾ ಬಿಜೆಪಿ ಕಾರ್ಯಕರ್ತೆ ಎನ್ನುವುದಕ್ಕೆ ಇದಕ್ಕಿಂತ ಹೆಚ್ಚಿನ ಪುರಾವೆ ಏನು ಬೇಕು? ಈ ಕಾರಣದಿಂದಲ್ಲವೇ ಅವರು ಬಿಜೆಪಿಯ ಅಮಿತ್ ಮಾಳವೀಯ ಅವರನ್ನು ವಿಚಾರಣೆಯಿಂದ ರಕ್ಷಿಸುತ್ತಿರುವುದು? ಎಂದು ಪ್ರಶ್ನಿಸಿದ್ದಾರೆ. ಈ ವಿಷಪೂರಿತ ಕಾರ್ಯಸೂಚಿಗೆ ಕಾನೂನಾತ್ಮಕವಾಗಿ ಉತ್ತರಿಸಬೇಕಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News