ತ್ರಿವಳಿ ತಲಾಕ್ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದ ಮಹಿಳೆಗೆ ಸಚಿವ ಸ್ಥಾನ ನೀಡಿದ ಉತ್ತರಾಖಂಡ ಸರಕಾರ

Update: 2020-10-21 11:06 GMT

ಡೆಹ್ರಾಡೂನ್: ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದ ತ್ರಿವಳಿ ತಲಾಖ್ ಪದ್ಧತಿಯ ವಿರುದ್ಧದ ಹೋರಾಟಗಾರ್ತಿ ಶಾಯರ ಬಾನೋ ಅವರಿಗೆ ಉತ್ತರಾಖಂಡ ಸರಕಾರ ಸಚಿವೆ ಸ್ಥಾನಮಾನ ನೀಡಿದೆ. ಬಿಜೆಪಿ ಸೇರಿದ ಹತ್ತೇ ದಿನಗಳಲ್ಲಿ ಆಕೆಗೆ ಸಚಿವ ಸ್ಥಾನ ದೊರಕಿದೆ. 

ಸುಪ್ರೀಂ ಕೋರ್ಟಿನಲ್ಲಿ ತ್ರಿವಳಿ ತಲಾಖ್ ಪದ್ಧತಿಯ ಕಾನೂಬದ್ಧತೆಯನ್ನು ಪ್ರಶ್ನಿಸಿದ ಪ್ರಥಮ ಮಹಿಳೆ ಎಂದು ಆಕೆ ಗುರುತಿಸಲ್ಪಟ್ಟಿದ್ದಾರೆ. ಆಕೆಗೆ ಸಚಿವ ಸ್ಥಾನಮಾನಕ್ಕೆ ಸಮಾನ ಹುದ್ದೆಯಾದ ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷೆ ಹುದ್ದೆಯನ್ನು ನೀಡಲಾಗಿದೆ ಎಂದು ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರ ಮಾಧ್ಯಮ ಸಂಘಟಕ ದರ್ಶನ್ ಸಿಂಗ್ ರಾವತ್ ಹೇಳಿದ್ದಾರೆ. ತಮಗೆ ನೀಡಲಾದ ಈ ಹುದ್ದೆ ನವರಾತ್ರಿ ಸಂದರ್ಭ ರಾಜ್ಯದ ಮಹಿಳೆಯರಿಗೆ ಮುಖ್ಯಮಂತ್ರಿ ನೀಡಿದ ಉಡುಗೊರೆ ಎಂದು ಬಾನೋ ಹೇಳಿದ್ದಾರೆ.

ಬಾನೋ ಪತಿ ಆಕೆಗೆ ಸ್ಪೀಡ್ ಪೋಸ್ಟ್ ಮೂಲಕ ವಿಚ್ಛೇದನ ನೀಡಿದ ನಾಲ್ಕು ತಿಂಗಳ ನಂತರ 2014ರಲ್ಲಿ ಆಕೆ ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಹತ್ತು ದಿನಗಳ ಹಿಂದೆಯಷ್ಟೇ ಆಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬನ್ಸಿಧರ್ ಭಗತ್ ಮತ್ತಿತರರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು. ಆಕೆಯ ಜತೆಗೆ ಮಹಿಳಾ ಆಯೋಗಕ್ಕೆ ಇನ್ನಿಬ್ಬರು ಉಪಾಧ್ಯಕ್ಷೆಯರನ್ನೂ ಸರಕಾರ ನೇಮಕಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News