ಸಫಾಯಿ ಕರ್ಮಚಾರಿ ಹುದ್ದೆಯ ಹೆಸರು ಬದಲು ಹೊಸ ಹೆಸರೇನು ಗೊತ್ತಾ?

Update: 2020-10-21 15:49 GMT

ಹೊಸದಿಲ್ಲಿ, ಅ.21: ಅರೆಸೇನಾ ಪಡೆ(ಪ್ಯಾರಾಮಿಲಿಟರಿ)ಯಲ್ಲಿ ಕನಿಷ್ಠ ದರ್ಜೆಯ ಸೇವಾ ಹುದ್ದೆಗಳಾದ ಸಫಾಯಿ ಕರ್ಮಚಾರಿ, ಕಹರ್, ಫರಾಶ್ ಮತ್ತು ಮಸಾಲ್ಚಿ ಎಂಬ ಸೇವಾ ವರ್ಗೀಕರಣದ ಬದಲು ಇನ್ನು ಮುಂದೆ ಬಹುಸೇವೆ ಸಿಬ್ಬಂದಿ (ಎಂಟಿಎಸ್) ಮತ್ತು ಅಡುಗೆಮನೆ ಸೇವೆ ಸಿಬ್ಬಂದಿ ಎಂಬ ವೃತ್ತಿಪರ ಪದನಾಮ ಬಳಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. 

ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಎಲ್ಲಾ ಅರೆಸೇನಾ ಪಡೆ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ(ಸಿಎಪಿಎಫ್)ಗಳಿಗೆ ಆದೇಶ ಜಾರಿಗೊಳಿಸಿದ್ದು , ಈ ಹುದ್ದೆಗಳಿಗೆ ಪೊಲೀಸರ ನೇಮಕಾತಿ ಸಂದರ್ಭ ಹೊಸ ಹೆಸರಿನಡಿ ಹುದ್ದೆಗೆ ಜಾಹೀರಾತು ನೀಡಬೇಕು ಎಂದು ಸೂಚಿಸಿದೆ. ಸಿಎಪಿಎಫ್‌ನಲ್ಲಿ ಅಡುಗೆ ಕೆಲಸ, ಸ್ವಚ್ಛತಾ ಕಾರ್ಯ, ತೋಟಗಾರಿಕೆ, ತೊಳೆಯುವುದು ಮತ್ತಿತರ ದೈನಂದಿನ ಕಾರ್ಯಗಳಿಗೆ ನೂರಾರು ಕಾನ್‌ಸ್ಟೇಬಲ್‌ಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಕಾನ್‌ಸ್ಟೇಬಲ್ ದಫ್ತರಿ(ಆಫೀಸ್ ಬಾಯ್), ಫರಾಶ್, ಪಿಯೋನ್ ಮತ್ತು ಸಫಾಯಿ ಕರ್ಮಚಾರಿಗಳ ಹುದ್ದೆಯನ್ನು ವಿಲೀನಗೊಳಿಸಲಾಗಿದ್ದು ಇನ್ನು ಮುಂದೆ ಎಂಟಿಎಸ್ (ಮಲ್ಟಿ ಟಾಸ್ಕಿಂಗ್ ಸ್ಟಾಫ್) ಎಂದು ಕರೆಯಲಾಗುತ್ತದೆ.

ಇದೇ ರೀತಿ , ಅಡುಗೆಯಾಳು, ವಾಟರ್ ಕ್ಯಾರಿಯರ್, ಬುಚರ್, ವೈಟರ್, ಅಡುಗೆಮನೆ ಸಹಾಯಕ, ಟೇಬಲ್ ಬಾಯ್, ಸ್ವಚ್ಛತಾ ಸಹಾಯಕರ ಹುದ್ದೆಯನ್ನೂ ವಿಲೀನಗೊಳಿಸಿದ್ದು ಇನ್ನು ಮುಂದೆ ‘ಕಾನ್‌ಸ್ಟೇಬಲ್ ಫಾರ್ ಕಿಚನ್ ಸರ್ವಿಸ್’ ಎಂದು ಕರೆಯಲಾಗುತ್ತದೆ. ಈ ಸೇವೆಗಳಿಗೆ ನೇಮಕಗೊಂಡಿರುವ ಹಲವಾರು ಉದ್ಯೋಗಿಗಳು ತಮ್ಮ ಉದ್ಯೋಗದ ಬಗ್ಗೆ ಪ್ರಸ್ತಾವಿಸಲು ಹಿಂಜರಿಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಹುದ್ದೆಗೆ ಗೌರವಯುತ ಹೆಸರು ನೀಡಲು ಸರಕಾರ ನಿರ್ಧರಿಸಿದೆ ಎಂದು ಸಿಎಪಿಎಫ್ ಅಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News