ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಲು ಮತ್ತೊಂದು ಪ್ಯಾಕೇಜ್ ರೂಪಿಸಲು ಸರಕಾರದ ನಿರ್ಧಾರ

Update: 2020-10-21 15:54 GMT

ಹೊಸದಿಲ್ಲಿ, ಅ.21: ಕೊರೋನ ಸೋಂಕಿನ ಪ್ರಕರಣಗಳಲ್ಲಿ ಇಳಿಮುಖ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ, ಆರ್ಥಿಕ ಚಟುವಟಿಕೆಗೆ ಪ್ರೋತ್ಸಾಹ ಮತ್ತು ಅರ್ಥವ್ಯವಸ್ಥೆಗೆ ಉತ್ತೇಜನ ನೀಡುವ ಉದ್ದೇಶದ ಮತ್ತೊಂದು ಪ್ಯಾಕೇಜ್ ರೂಪಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಐದು ತಿಂಗಳ ಹಿಂದೆ ಕೇಂದ್ರ ಸರಕಾರ ಘೋಷಿಸಿದ್ದ ಮೊದಲ ಉತ್ತೇಜಕ ಪ್ಯಾಕೇಜ್ ‘ಆತ್ಮನಿರ್ಭರ ಭಾರತ್’ನಡಿ 21 ಲಕ್ಷ ಕೋಟಿ ರೂ. ಮೊತ್ತದ ಹಣಕಾಸು ಮತ್ತು ವಿತ್ತೀಯ ನೆರವು ಒದಗಿಸಲಾಗಿದೆ ಎಂದು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೃಷಿ, ಕಾರ್ಮಿಕರು, ಸಾಲ, ಆರ್ಥಿಕತೆಯ ಪುನಶ್ಚೇತನಕ್ಕೆ ಯೋಜನೆಗಳನ್ನು ಒಳಗೊಂಡಿರುವ ಆತ್ಮನಿರ್ಭರ ಪ್ಯಾಕೇಜ್ ದೀರ್ಘಾವಧಿಯ ದೃಷ್ಟಿಕೋನವನ್ನು ಹೊಂದಿದೆ ಎಂದು ಆರ್ಥಿಕತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಹಲವು ಸಚಿವರು ಹಾಗೂ ವಲಯಗಳಿಂದ ಸಲಹೆಗಳನ್ನು ಸರಕಾರ ಆಹ್ವಾನಿಸಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.

ಎಪ್ರಿಲ್-ಜೂನ್ ಅವಧಿಯಲ್ಲಿ ಅತ್ಯಂತ ತಳಮಟ್ಟಕ್ಕೆ ಕುಸಿದಿರುವ ಜಿಡಿಪಿಗೆ ಪುನರುತ್ತೇಜನ ನೀಡಲು ಎರಡನೇ ಪ್ಯಾಕೇಜ್ ಘೋಷಿಸುವ ಬಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಸುಳಿವು ನೀಡಿದ್ದರು. ಕೊರೋನ ವೈರಸ್ ಸೋಂಕಿನ ಬಿಕ್ಕಟ್ಟು ಹಾಗೂ ಅದರ ನಿಯಂತ್ರಣಕ್ಕೆ ಜಾರಿಗೊಳಿಸಿದ್ದ ಲಾಕ್‌ಡೌನ್‌ನಿಂದಾಗಿ ಈ ವಿತ್ತ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ದಾಖಲೆ ಮಟ್ಟಕ್ಕೆ ಕುಸಿದಿದ್ದು ಈ ವಿತ್ತ ವರ್ಷದಲ್ಲಿ ದೇಶದ ಜಿಡಿಪಿ ಮೈನಸ್ 9.5% ಶೇ.ಕ್ಕೆ ಕುಗ್ಗಬಹುದು ಎಂದು ಆರ್‌ಬಿಐ ಮುನ್ಸೂಚನೆ ನೀಡಿದೆ. ಗ್ರಾಹಕರ ಬೇಡಿಕೆ ಮತ್ತು ಹೂಡಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರಿ ನೌಕರರಿಗೆ ವೇತನದ ಮುಂಗಡ ಭಾಗಶಃ ಪಾವತಿ ಮತ್ತು ಎಲ್‌ಟಿಸಿ ಸೌಲಭ್ಯವನ್ನು ಹೊಂದಿರುವ 73,000 ಕೋಟಿ ರೂ. ಪ್ಯಾಕೇಜ್ ಅನ್ನು ಕಳೆದ ಸೋಮವಾರ ವಿತ್ತ ಸಚಿವರು ಘೋಷಿಸಿದ್ದರು. ಕೊರೋನ ವೈರಸ್ ಹಿನ್ನೆಲೆಯಲ್ಲಿ, ಈ ವಿತ್ತ ವರ್ಷದಲ್ಲಿ ಭಾರತದ ಜಿಡಿಪಿ 10.3% ಶೇ. ಪ್ರಮಾಣದಲ್ಲಿ ಕುಗ್ಗಲಿದೆ ಎಂದು ಅಂತರ್ ರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಮುನ್ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News