'ಭಾರತದ ಜಿಡಿಪಿ ಕುಸಿತ ಶೇ. 23 ಅಲ್ಲ ಶೇ. 50, ನಿರುದ್ಯೋಗ 20 ಕೋಟಿಗೂ ಅಧಿಕ'

Update: 2020-10-22 17:16 GMT
ಪ್ರೊ. ಅರುಣ್ ಕುಮಾರ್ (Photo: nationalheraldindia.com)

ಹೊಸದಿಲ್ಲಿ, ಅ.22: ಭಾರತದ ಜಿಡಿಪಿ ದರ 23 ಶೇ.ದಷ್ಟು ಕುಸಿತ ಕಾಣಲಿದೆ ಮತ್ತು 122 ಮಿಲಿಯನ್ ಉದ್ಯೋಗ ನಷ್ಟವಾಗಲಿದೆ ಎಂಬ ನ್ಯಾಷನಲ್ ಸ್ಟಾಟಿಸ್ಟಿಕಲ್ ಆರ್ಗನೈಸೇಷನ್(ಎನ್‌ಎಸ್‌ಒ)ನ ಅಭಿಪ್ರಾಯ ಸರಿಯಲ್ಲ, ಜಿಡಿಪಿ ದರ 50 ಶೇ.ದಷ್ಟು ಕುಸಿಯುವ ಮತ್ತು 200 ಮಿಲಿಯನ್ ಉದ್ಯೋಗ ನಷ್ಟವಾಗುವ ಸಾಧ್ಯತೆಯಿದೆ ಎಂದು ಖ್ಯಾತ ಅರ್ಥಶಾಸ್ತ್ರಜ್ಞ, ಹೊಸದಿಲ್ಲಿಯ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್‌ನ ಪ್ರೊಫೆಸರ್ ಅರುಣ್ ಕುಮಾರ್ ಹೇಳಿದ್ದಾರೆ.

ಜಿಡಿಪಿ ಲೆಕ್ಕಾಚಾರದಲ್ಲಿ ಅಸಂಘಟಿತ ವಲಯವೂ ಸಂಘಟಿತ ವಲಯದ ಪ್ರಮಾಣದಲ್ಲೇ ಬೆಳವಣಿಗೆ ಹೊಂದಲಿದೆ ಎಂದು ಭಾವಿಸಿರುವುದರಿಂದ ಜಿಡಿಪಿಯನ್ನು ಅತಿ ಅಂದಾಜಿಸಲಾಗಿದೆ. ಕಾರ್ಯನೀತಿ ರೂಪಿಸುವವರು ಅಸಂಘಟಿತ ವಲಯಕ್ಕೆ ಸಾಕಷ್ಟು ಗಮನ ನೀಡಿಲ್ಲ ಎಂದವರು ಹೇಳಿದ್ದಾರೆ. ಹೊಸದಿಲ್ಲಿಯ ‘ಇಂಪ್ಯಾಕ್ಟ್ ಆ್ಯಂಡ್ ಪಾಲಿಸಿ ರಿಸರ್ಚ್ ಇನ್‌ಸ್ಟಿಟ್ಯೂಟ್’ ಆಯೋಜಿಸಿದ್ದ ವೆಬಿನಾರ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಅಸಂಘಟಿತ ಕ್ಷೇತ್ರದ ಮೇಲೆ ಕೊರೋನ ಸೋಂಕಿನ ಪರಿಣಾಮದ ಬಗ್ಗೆ ಉಲ್ಲೇಖಿಸಿದ ಅವರು, ಒಟ್ಟು ಉತ್ಪಾದನೆಯ 45 ಶೇ.ದಷ್ಟು ಪ್ರಮಾಣ ಅಸಂಘಟಿತ ಕ್ಷೇತ್ರದ 94 ಶೇ.ದಷ್ಟು ಉದ್ಯೋಗದಿಂದ ಬರುತ್ತದೆ ಮತ್ತು ಈ ಕ್ಷೇತ್ರದಲ್ಲಿ ಉಳಿತಾಯ ಕಡಿಮೆಯಾಗಿರುತ್ತದೆ.

ಲಾಕ್‌ಡೌನ್‌ನಿಂದಾಗಿ ಈ 94 ಶೇ. ಜನಸಮುದಾಯದ ಆದಾಯ ಕಡಿಮೆಯಾದರೆ ಕೃಷಿ ಉತ್ಪನ್ನದಂತಹ ಅಗತ್ಯ ವಸ್ತುಗಳ ಬೇಡಿಕೆ ಕುಸಿಯುತ್ತದೆ. ಅತೀ ಸಣ್ಣ ಕ್ಷೇತ್ರದ ಸುಮಾರು 6 ಕೋಟಿ ಸಂಸ್ಥೆಗಳು ಲಾಕ್‌ಡೌನ್‌ನಿಂದಾಗಿ ತಮ್ಮ ಉಳಿತಾಯವನ್ನು ಕಳೆದುಕೊಂಡಿದ್ದು ಮರಳಿ ಕಾರ್ಯಾರಂಭ ಮಾಡುವ ಸ್ಥಿತಿಯಲ್ಲಿಲ್ಲ. ಸ್ವೋದ್ಯೋಗಿಗಳು, ಮೇಸ್ತ್ರಿಗಳು, ಟ್ಯಾಕ್ಸಿ ಮತ್ತು ಆಟೋ ಚಾಲಕರ ಸ್ಥಿತಿಯೂ ಇದೇ ರೀತಿಯಾಗಿದೆ. ವಿಶ್ವದಲ್ಲೇ ಬೃಹತ್ ಅಸಂಘಟಿತ ಕ್ಷೇತ್ರವನ್ನು ಹೊಂದಿರುವುದರಿಂದ ಪರಿಸ್ಥಿತಿ ಕಳವಳಕಾರಿಯಾಗಿದೆ ಎಂದವರು ಹೇಳಿದ್ದಾರೆ. ಲಾಕ್‌ಡೌನ್ ಸಂದರ್ಭದ ನಿರುದ್ಯೋಗದ ಬಗ್ಗೆ ‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ’(ಸಿಎಂಐಇ) ಎಂಬ ಖಾಸಗಿ ಸಂಸ್ಥೆ ನೀಡಿರುವ ಅಂಕಿಅಂಶವೂ ತಪ್ಪು. ಲಾಕ್‌ಡೌನ್ ಸಂದರ್ಭಕ್ಕೂ ಎರಡನೇ ವಿಶ್ವಯುದ್ಧ ಮತ್ತು 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭಕ್ಕೂ ವ್ಯತ್ಯಾಸವಿದೆ.

ವಿಶ್ವಯುದ್ಧ ಮತ್ತು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಉದ್ಯೋಗದಲ್ಲಿ ಕೊರತೆಯಿರಲಿಲ್ಲ ಆದರೆ ಬೇಡಿಕೆ ಕುಸಿದ ಕಾರಣ ಇತರ ಸರಕಿನ ಉತ್ಪಾದನೆಯತ್ತ ಗಮನ ನೀಡಲಾಗಿದೆ. ಆದರೆ ಲಾಕ್‌ಡೌನ್ ಸಾಮೂಹಿಕ ನಿರುದ್ಯೋಗದ ಪರಿಸ್ಥಿತಿಗೆ ಕಾರಣವಾಗಿದೆ. ಸಿಎಂಐಇ ಸುಮಾರು 122 ಮಿಲಿಯನ್ ಉದ್ಯೋಗಿಗಳಿಗೆ ಉದ್ಯೋಗ ನಷ್ಟವಾಗಿದೆ ಎಂದು ಅಂದಾಜಿಸಿದೆ. ಆದರೆ ವಾಸ್ತವವಾಗಿ 200 ಮಿಲಿಯನ್‌ಗೂ ಅಧಿಕ ಉದ್ಯೋಗ ನಷ್ಟವಾಗಿದೆ. ಉದ್ಯೋಗ ಕಳೆದುಕೊಂಡು ತಮ್ಮ ಹುಟ್ಟೂರಿನತ್ತ ವಲಸೆ ಹೋದ ಕಾರ್ಮಿಕರನ್ನು ಸಿಎಂಐಇ ಲೆಕ್ಕಕ್ಕೇ ತೆಗೆದುಕೊಂಡಿಲ್ಲ ಎಂದು ಕುಮಾರ್ ಹೇಳಿದ್ದಾರೆ. ಸಮಾಜದ ಎಲ್ಲಾ ಭಾಗಗಳಲ್ಲೂ ಹೂಡಿಕೆ ಮತ್ತು ಬಳಕೆ ಕುಸಿದಿದ್ದು ಇದು ಬೇಡಿಕೆ ಮತ್ತು ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಇದರ ಪರಿಣಾಮ ಉದ್ಯಮವೂ ಕುಸಿತದ ಹಾದಿಯಲ್ಲಿ ಸಾಗಿದೆ. 30ಶೇ.ದಷ್ಟು ಉದ್ಯಮ ಮತ್ತು 30 ಶೇ.ದಷ್ಟು ಸಣ್ಣ ವ್ಯಾಪಾರ ಮುಚ್ಚಲಿದೆ ಎಂದು ಅಖಿಲ ಭಾರತ ಉತ್ಪಾದಕರ ಸಂಘಟನೆ ಅಂದಾಜಿಸಿದೆ. ಮುಂಬರುವ ವರ್ಷದಲ್ಲಿ ಉದ್ಯಮದ ಅವನತಿ ಇನ್ನಷ್ಟು ಹೆಚ್ಚಲಿದೆ. ಸಾಲದ ಮೊತ್ತ ಹೆಚ್ಚಿರುವ ಸಂಸ್ಥೆಗಳಲ್ಲಿ ಈ ಅಪಾಯ ಹೆಚ್ಚಿರಲಿದೆ. ಮೊರಟೋರಿಯಂ (ಸ್ತಂಭನ) ಅವಧಿಯನ್ನು 6 ತಿಂಗಳವರೆಗೆ ವಿಸ್ತರಿಸಿರುವ ಸರಕಾರದ ಕ್ರಮ ತಾತ್ಕಾಲಿಕ ಪರಿಹಾರವಷ್ಟೇ . ಬಡ್ಡಿದರ ಇಳಿಸುವ ಮೂಲಕ ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡುವ ಆರ್‌ಬಿಐ ಯೋಜನೆ ನಿಷ್ಪ್ರಯೋಜಕ ಎಂದವರು ಅಭಿಪ್ರಾಯ ಪಟ್ಟಿದ್ದು, ಕೇಂದ್ರ ಸರಕಾರ ತಕ್ಷಣ ನಿಧಿ ಸಂಗ್ರಹಿಸಲು ಕೋವಿಡ್-19 ಬಾಂಡ್‌ಗಳನ್ನು ಬಿಡುಗಡೆಗೊಳಿಸಬೇಕು ಎಂದರು.

ತೆರಿಗೆ ಸಂಗ್ರಹದಲ್ಲೂ ಇಳಿಕೆ

ಆರ್ಥಿಕತೆ ಕ್ಷೀಣಿಸಿದಾಗ ತೆರಿಗೆ ಸಂಗ್ರಹಣೆಯೂ ಕಡಿಮೆಯಾಗುತ್ತದೆ. ಈ ವಿತ್ತ ವರ್ಷದಲ್ಲಿ ಆರ್ಥಿಕತೆ 10ಶೇ. ಪ್ರಗತಿಯಾಗಲಿದೆ ಎಂಬ ನಿರೀಕ್ಷೆಯಲ್ಲಿ ಈ ವರ್ಷದ ಬಜೆಟ್ ರೂಪಿಸಲಾಗಿದೆ. ಆದರೆ ಆರ್ಥಿಕತೆ ಕುಸಿಯುತ್ತಾ ಸಾಗಿರುವುದರಿಂದ ತೆರಿಗೆ ಸಂಗ್ರಹದಲ್ಲೂ 40ಶೇ.ಕ್ಕೂ ಹೆಚ್ಚು ಇಳಿಕೆಯಾಗಿದೆ. ಕೇಂದ್ರ ಮತ್ತು ರಾಜ್ಯಗಳ ಆದಾಯವು ಜಿಡಿಪಿಯ 16.5ಶೇ.ದ ಬದಲು 12ಶೇ.ಕ್ಕೆ ಕಡಿಮೆಯಾಗಲಿದೆ ಎಂದು ಪ್ರೊ. ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News