ಕಾಸರಗೋಡಿನ ಅನಂತಪುರ ದೇವಳ ಪ್ರವೇಶಿಸಿದ ಅಚ್ಚರಿಯ ಅತಿಥಿ!

Update: 2020-10-22 08:21 GMT
Photo: Twitter(@Deepash89016327)
 

ಕಾಸರಗೋಡು: ಕಾಸರಗೋಡಿನ ಶ್ರೀ ಅನಂತಪುರ ದೇವಸ್ಥಾನಕ್ಕೆ ಮಂಗಳವಾರ ಅಚ್ಚರಿಯ ಅತಿಥಿಯೊಬ್ಬರ ಆಗಮನವಾಗಿತ್ತು. ಈ ಅತಿಥಿ ಬೇರ್ಯಾರೂ ಅಲ್ಲ, ಬಹಳಷ್ಟು ಸಮಯದಿಂದ ದೇವಳದ ಕೆರೆಯಲ್ಲಿರುವ 'ಬಬಿಯಾ' ಎಂಬ ಹೆಸರಿನ ಮೊಸಳೆ. ಇದೊಂದು 'ಶಾಖಾಹಾರಿ' ಮೊಸಳೆ ಎಂದೇ ತಿಳಿಯಲಾಗಿದ್ದು ಇದೇ ಮೊದಲ ಬಾರಿಗೆ ಅದು ಕೆರೆಯಿಂದ ಹೊರಬಂದು ದೇವಸ್ಥಾನವನ್ನು ಪ್ರವೇಶಿಸಿದೆ ಎಂದು ಅರ್ಚಕರು ಹೇಳುತ್ತಾರೆ.

"ಬಬಿಯಾ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದೆ ಎಂದು ಕೆಲ ವರದಿಗಳಲ್ಲಿ ಬರೆಯಲಾಗಿದೆ, ಇದು ಸರಿಯಲ್ಲ, ಅದು ದೇವಳ ಪ್ರಾಂಗಣಕ್ಕೆ ಮಂಗಳವಾರ ಸಂಜೆ ಆಗಮಿಸಿ ಸ್ವಲ್ಪ ಸಮಯ ಅಲ್ಲಿದ್ದು ನಂತರ ಮುಖ್ಯ ಅರ್ಚಕ ಚಂದ್ರ ಪ್ರಕಾಶ್ ನಂಬಿಸನ್ ಅವರು ಸೂಚಿಸಿದಂತೆ ತನ್ನ ವಾಸ ಸ್ಥಳ ದೇವಳದ ಕೆರೆಗೆ ಮರಳಿದೆ,'' ಎಂದು ದೇವಸ್ಥಾನದ ಅಧಿಕಾರಿ ಚಂದ್ರಶೇಖರನ್ ಹೇಳಿದ್ದಾರೆ.

ಈ ಮೊಸಳೆ ದೇವಸ್ಥಾನದ ಕೆರೆಗೆ ಹೇಗೆ ಬಂದಿದೆ ಹಾಗೂ ಅದಕ್ಕೆ ಬಬಿಯಾ ಎಂಬ ಹೆಸರನ್ನು ಯಾರು ಇಟ್ಟಿದ್ದರು ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಕೆಲವರ ಪ್ರಕಾರ ಇದು ಇಲ್ಲಿ 70 ವರ್ಷಗಳಿಂದ ಇದ್ದು ಯಾವತ್ತೂ ಉಗ್ರವಾಗಿ ವರ್ತಿಸಿಲ್ಲ,  ದೇವಸ್ಥಾನದ ಅರ್ಚಕರು ನೀಡುವ ಪ್ರಸಾದವನ್ನು ತಿಂದು ಅದು ಮತ್ತೆ ಕೆರೆಯನ್ನು ಸೇರುತ್ತದೆ.

ಬಹಳ ವರ್ಷಗಳ ಹಿಂದೆ ಈ ಭಾಗದಲ್ಲಿ ಸರ್ಕಸ್ ಇದ್ದಾಗ ಅಲ್ಲಿನ ಸಿಬ್ಬಂದಿ ಮೊಸಳೆ ಮರಿಗಳನ್ನು ಇಲ್ಲಿ ಬಿಟ್ಟಿರುವ  ಸಾಧ್ಯತೆಯಿದ್ದು ಅವುಗಳಲ್ಲಿ ಬದುಕುಳಿದ ಮೊಸಳೆ ಇದಾಗಿರಬೇಕೆಂದು ಕೆಲವರು ಹೇಳುತ್ತಾರೆ.

"ಪ್ರತಿ ದಿನ ಅರ್ಚಕರು ಎರಡು ಬಾರಿ ಬಬಿಯಾಗೆ ಆಹಾರ ನೀಡುತ್ತಾರೆ. ಕೆಲವೊಮ್ಮೆ ಅನ್ನದ ಉಂಡೆಯನ್ನು ಅದರ ಬಾಯಿಗೆ ಅವರು ಹಾಗುತ್ತಾರೆ. ದೇವಳದ ಕೆರೆಯಲ್ಲಿ ಬಹಳಷ್ಟು ಮೀನುಗಳಿದ್ದರೂ ಬಬಿಯಾ ಅವುಗಳ ಮೇಲೆ ದಾಳಿ ನಡೆಸುವುದಿಲ್ಲ ಹಾಗೂ ಅವುಗಳನ್ನು ತಿನ್ನುವುದಿಲ್ಲ ಎಂದು ಅಂದುಕೊಂಡಿದ್ದೇವೆ, ಅದು ಸಂಪೂರ್ಣ ಶಾಖಾಹಾರಿ ಮೊಸಳೆ,'' ಎಂದು ದೇವಸ್ಥಾನದ ಇನ್ನೊಬ್ಬ ಉದ್ಯೋಗಿ ತಿಳಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News