ಕಾಂಗ್ರೆಸ್ ನಲ್ಲಿ ನಿಮ್ಮದು ಹಲ್ಲಿಲ್ಲದ ಹುಲಿಯ ಪರಿಸ್ಥಿತಿ: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಲೇವಡಿ

Update: 2020-10-22 11:52 GMT

ಬೆಂಗಳೂರು, ಅ. 22: `ಸಿದ್ದರಾಮಯ್ಯನವರೇ ನೀವು ಬಳಸುತ್ತಿರುವ ಪದಗಳೇ ಯಾರು `ಕಾಡು ಮನುಷ್ಯ' ಎಂಬುದನ್ನು ಸಾಬೀತು ಪಡಿಸುತ್ತಿದೆ. ಕಾಡುಮನುಷ್ಯ, ನಾಲಾಯಕ್, ಬೀದಿ ಅಲೆಯುತ್ತಿದ್ದವ, ಎಲುಬಿಲ್ಲದವ ಎಂಬ ನಿಮ್ಮ ಮಾತುಗಳೇ ಕಾಂಗ್ರೆಸ್ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ನೀವು ಕಾಂಗ್ರೆಸ್ ಪಕ್ಷದ ವಿದೂಷಕ ಇದ್ದ ಹಾಗೆ ಆಗಿದೆ!' ಎಂದು ಬಿಜೆಪಿ ಲೇವಡಿ ಮಾಡಿದೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, `ಸಿದ್ದರಾಮಯ್ಯ ಅವರೇ, ಡಿ.ಜೆ.ಹಳ್ಳಿ ಗಲಭೆ ನಡೆಸಿದವರ ಪರವಾಗಿ ನೀವು ಯಾಕೆ ವಕಾಲತ್ತು ವಹಿಸಿದ್ದೀರಿ? ಆರೋಪಿಗಳನ್ನು ಅಮಾಯಕರು ಎಂದು ಬಿಂಬಿಸಿದ ನೀವು, ಈಗ ಗಲಭೆಯ ರೂವಾರಿ ಸಂಪತ್ ರಾಜ್ ಅವರಿಗೆ ಚುನಾವಣಾ ಜವಾಬ್ದಾರಿ ಹೊರಿಸಿದ್ದೀರಿ. ನಿಮ್ಮದೇ ದಲಿತ ಶಾಸಕರ ಪರ ನಿಲ್ಲುವ ತಾಕತ್ತು ನಿಮಗಿಲ್ಲವೇ?' ಎಂದು ಪ್ರಶ್ನಿಸಿದೆ.

'ಚುನಾವಣೆಯಲ್ಲಿ ಸ್ವಾರ್ಥಕ್ಕಾಗಿ ಡಾ.ಜಿ.ಪರಮೇಶ್ವರರನ್ನೇ ಸೋಲಿಸಿದ ಕುತಂತ್ರಿ ನೀವಲ್ಲವೇ? ಈ ಹಿಂದಿನ ಉಪಚುನಾವಣೆಯಲ್ಲಿ ನಳೀನ್ ಕುಮಾರ್ ಕಟೀಲು ಅವರ ನಾಯಕತ್ವದಲ್ಲಿ 15 ಕ್ಷೇತ್ರಗಳಲ್ಲಿ 12 ಸ್ಥಾನ ಗೆದ್ದು ಬಿ.ಎಸ್.ಯಡಿಯೂರಪ್ಪ ಅವರ ಗದ್ದುಗೆ ಬಲಪಡಿಸಿದ್ದೇವೆ. ಈ ಉಪಚುನಾವಣೆಯಲ್ಲೂ ಬಿಜೆಪಿ ಗೆಲ್ಲಲಿದೆ' ಎಂದು ಬಿಜೆಪಿ ಭವಿಷ್ಯ ನುಡಿದಿದೆ.

'ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಅವರು 2019ರಲ್ಲಿ 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದರು. ಜನತೆ ನಿಮ್ಮ ಬೆನ್ನುಮೂಳೆ ಮುರಿದ ಇತಿಹಾಸ ನೆನಪಿಸಿಕೊಳ್ಳಿ, ಬಾದಾಮಿಯಲ್ಲಿ ನೀವು ಗೆದ್ದದ್ದು ಕೇವಲ 1,696 ಮತಗಳಿಂದ! ಸ್ವಲ್ಪ ವ್ಯತ್ಯಾಸ ಆಗಿದ್ದರೂ ನೀವು ಕಾಡುಮನುಷ್ಯರಂತೆ ಜೀವನ ಮಾಡಬೇಕಿತ್ತು! ಸಿದ್ದರಾಮಯ್ಯನವರೇ, ಕಾಂಗ್ರೆಸ್ ಸೇರುವುದಕ್ಕೂ ಮುನ್ನ ಮೊದಲು ಜೆಡಿಎಸ್‍ನಲ್ಲಿ ಸಕಲ ಅಧಿಕಾರ ಭಾಗ್ಯಗಳನ್ನು ಅನುಭವಿಸಿ, ಅವರಿಗೇ ನಾಮ ಹಾಕಿದ ಮಹಾನುಭಾವರು ನೀವೇ ಅಲ್ಲವೇ? ಬಿಜೆಪಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದರೆ ಉನ್ನತ ಸ್ಥಾನ ಸಿಗುವುದೆಂದು ನೀವೇ ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು' ಎಂದು ತಿಳಿಸಿದೆ.

'ಸಿದ್ದರಾಮಯ್ಯ ಅವರೇ, ಜನರ ಭಾವನೆಗೆ ಸ್ಪಂದಿಸದ ನಿಮ್ಮನ್ನು ಸ್ವಕ್ಷೇತ್ರ ಚಾಮುಂಡೇಶ್ವರಿಯ ಮತದಾರರು `ಬೀದಿಯಲ್ಲಿ ಅಲೆಯುವಂತೆ' ಮಾಡಿದ್ದಾರೆ ಎಂಬುದನ್ನು ಮರೆಯಬೇಡಿ. ಕಾಂಗ್ರೆಸ್ ಪಕ್ಷದಲ್ಲಿ ನಿಮ್ಮ ಸ್ಥಿತಿ ಉಗುರು ಮತ್ತು ಹಲ್ಲು ಇಲ್ಲದ ಹುಲಿಯ ಪರಿಸ್ಥಿತಿಯಂತಾಗಿದೆ' ಎಂದು ಬಿಜೆಪಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ಧ ಟ್ವಿಟ್ಟರ್ ನಲ್ಲಿ ತೀವ್ರ ವಾಗ್ದಾಳಿ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News