ಹಲವೆಡೆ ಎಸಿಬಿ ಕಾರ್ಯಾಚರಣೆ: ಲಂಚ ಸ್ವೀಕರಿಸುತ್ತಿದ್ದಾಗ ಇಬ್ಬರ ಬಂಧನ

Update: 2020-10-22 13:52 GMT

ಬೆಂಗಳೂರು, ಅ.22: ಅಕ್ರಮ ಆಸ್ತಿ ಸಂಪಾದನೆ ಆರೋಪ ಬೆನ್ನಲ್ಲೇ ಸರಕಾರಿ ಅಧಿಕಾರಿಗಳಿಬ್ಬರ ನಿವಾಸದ ಮೇಲೆ ಎಸಿಬಿ ಪೊಲೀಸರು ದಾಳಿ ನಡೆಸಿದರು.

ಬಾಗಲಕೋಟೆ ಜಿ.ಪಂ. ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ವಿಭಾಗದ ಸಹಾಯಕ ಇಂಜಿನಿಯರ್ ಅಶೋಕ್ ಶಂಕರಪ್ಪ ತೋಪಲಕಟ್ಟಿ ಅವರ ಮನೆ, ಕಚೇರಿ, ಗ್ಯಾಸ್ ಏಜೆನ್ಸಿ ಮೇಲೆ ಎಸಿಬಿ ತನಿಖಾಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದರು.

ಅದೇ ರೀತಿ ಗದಗ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಎಸ್.ಎನ್.ರುದ್ರೇಶ್ ಅವರ ಚಿತ್ರದುರ್ಗ ಜಿಲ್ಲೆಯಲ್ಲಿರುವ ಕೊಡಗಹಳ್ಳಿ ನಿವಾಸ, ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

ಅಕ್ರಮ ಆಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದ್ದು, ಶೋಧ ಮುಂದುವರಿದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಪಿಡಿಓ ಎಸಿಬಿ ಬಲೆಗೆ

ದಾವಣಗೆರೆ: ಇ-ಸೊತ್ತು ಕೊಡಲು ಎರಡು ಸಾವಿರ ಲಂಚ ಪಡೆಯುತ್ತಿದ್ದ ಪಿಡಿಓಯೊಬ್ಬರು ಎಸಿಬಿ ಬಲೆಗೆ ಗುರುವಾರ ಬಿದ್ದಿದ್ದಾರೆ.

ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮ ಪಂಚಾಯತ್ ಪಿಡಿಓ ಹನಮಂತಪ್ಪ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಇ-ಸೊತ್ತು ಕೊಡಲು ರಂಗನಾಥ ಎಂಬುವವರ ಬಳಿ ಪಿಡಿಓ ಅವರು ಎರಡು ಸಾವಿರ ರೂ.ಗೆ ಬೇಡಿಕೆಯಟ್ಟಿದ್ದರು. ಇದನ್ನು ಅವರು ಎಸಿಬಿ ಅವರ ಗಮನಕ್ಕೆ ತಂದಿದ್ದಾರೆ. ಗ್ರಾಮ ಪಂಚಾಯತ್‍ನಲ್ಲಿ ರಂಗನಾಥ ಅವರಿಂದ ಲಂಚಪಡೆಯುವ ವೇಳೆ ಸಿಕ್ಕಿ ಬಿದ್ದಿದ್ದಾರೆ.  

ಎಸಿಬಿ ಡಿವೈಎಸ್ಪಿ ಪರಮೇಶ್ವರಪ್ಪ ನೇತೃತ್ವದಲ್ಲಿ ದಾಳಿ ನಡೆದಿದೆ.

ಎಸಿಬಿ ಬಲೆಗೆ ಬಿದ್ದ ಪೋರೆನ್ಸಿಕ್ ಲ್ಯಾಬ್ ತಜ್ಞ

ತುಮಕೂರು: ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಬ್ಯಾಂಕ್ ಅಫ್ ಬರೋಡದಲ್ಲಿ ನೌಕರಿ ಪಡೆದಿದ್ದ ವ್ಯಕ್ತಿಯ ಬೆಳರಚ್ಚು ಮುದ್ದೆಯಲ್ಲಿ ಕಂಡು ಬಂದ ದೋಷವನ್ನು ತಿದ್ದುಪಡಿ ಮಾಡಲು ವ್ಯಕ್ತಿಯಿಂದ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಬೆಂಗಳೂರಿನ ಮಡಿವಾಳದ ಪೋರೆನ್ಸಿಕ್ ಲ್ಯಾಬ್ ನ ಹಿರಿಯ ತಜ್ಞರೊಬ್ಬರನ್ನು ತುಮಕೂರಿನ ಎಸಿಬಿ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ನಗರದ ಪೂರ್ಹೌಸ್ ಕಾಲೋನಿಯ ನಿವಾಸಿಯೊಬ್ಬರು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಬ್ಯಾಂಕ್ ಆಫ್ ಬರೋಡದಲ್ಲಿ ಉದ್ಯೋಗ ಪಡೆದಿದ್ದರು. ಉದ್ಯೋಗ ನೇಮಕಕ್ಕೂ ಮುನ್ನ ಬ್ಯಾಂಕಿನವರು, ಅಭ್ಯರ್ಥಿ ಅರ್ಜಿ ಸಲ್ಲಿಸುವಾಗ ನೀಡಿದ ಬೆರಳಚ್ಚು ಮುದ್ರೆ ಮತ್ತು ಈಗ ನೀಡಿರುವ ಬೆರಳಚ್ಚು ಮುದ್ರೆಯಲ್ಲಿ ವ್ಯತಾಸ ಕಂಡು ಬರುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ದೃಢೀಕರಿಸಿ ನೀಡುವಂತೆ ಮಡಿವಾಳದ ಪೋರೆನ್ಸಿಕ್ ಲ್ಯಾಬ್‍ಗೆ ಪತ್ರ ಬರೆದಿದ್ದರು.

ಸದರಿ ಪತ್ರದ ಆಧಾರದ ಮೇಲೆ ಮದ್ಯವರ್ತಿಗಳ ಮೂಲಕ ಅಭ್ಯರ್ಥಿಯನ್ನು ಸಂಪರ್ಕಿಸಿದ ಡಿವೈಎಸ್ಪಿ ಶರಣಪ್ಪ.ಡಿ.ಎಸ್ 1 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಹಣ ನೀಡಲು ಇಷ್ಟವಿಲ್ಲದ ಅವರು ತುಮಕೂರು ಎಸಿಬಿಗೆ ದೂರು ನೀಡಿದ್ದರು. ಸದರಿ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿದ ಪೊಲೀಸರು ಇಂದು, ಮಧ್ಯವರ್ತಿಯ ಮೂಲಕ ಶರಣ್ಣಪ್ಪ ಅವರಿಗೆ 60,000 ರೂ ನೀಡುವಾಗ ಲಂಚದ ಹಣ ಸಮೇತ ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News