ಪಿಯುಸಿ: ಶೇ.30ರಷ್ಟು ಪಠ್ಯ ಕಡಿತಗೊಳಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧಾರ

Update: 2020-10-22 12:03 GMT

ಬೆಂಗಳೂರು, ಅ.22: ಕೊರೋನ ಸೋಂಕಿನಿಂದ ಕಾಲೇಜುಗಳು ಪುನಾರಾರಂಭಗೊಳ್ಳದ ಹಿನ್ನೆಲೆ ಪಿಯುಸಿಯ ಶೇ.30ರಷ್ಟು ಪಠ್ಯವನ್ನು ಕಡಿತಗೊಳಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳ ವಿಜ್ಞಾನ ವಿಷಯಗಳನ್ನು (ಭೌತ ವಿಜ್ಞಾನ, ರಸಾಯನ ವಿಜ್ಞಾನ, ಜೀವ ವಿಜ್ಞಾನ, ಗಣಿತ ಶಾಸ್ತ್ರ) ಹೊರತುಪಡಿಸಿ ಇತರೆ ವಿಷಯಗಳಲ್ಲಿ ಪಠ್ಯವನ್ನು ಕಡಿತಗೊಳಿಸಲು ಪಿಯು ಬೋರ್ಡ್ ನಿರ್ಧಾರ ಮಾಡಿದೆ. ಈ ಪಠ್ಯಕ್ರಮ 2020–21ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಿದೆ.

ವಿಜ್ಞಾನ ವಿಷಯಗಳ ಪಠ್ಯವನ್ನು ಸಿಬಿಎಸ್‍ಇ ಶಿಕ್ಷಣ ಮಂಡಳಿ ನಿಗದಿಪಡಿಸಿದಂತೆ ಯಥಾವತ್ ಆಗಿ ಅಳವಡಿಸಲು ತೀರ್ಮಾನ ಮಾಡಲಾಗಿದೆ. ಇತರೆ ಒಟ್ಟು 34 ವಿಷಯಗಳಲ್ಲಿ ಕರ್ನಾಟಕ ಸಂಗೀತ ವಿಷಯಕ್ಕೆ ಕಳೆದ ಎರಡು ವರ್ಷಗಳಲ್ಲಿ ಯಾವುದೇ ವಿದ್ಯಾರ್ಥಿ ದಾಖಲಾಗದೇ ಇರುವುದರಿಂದ ಆ ವಿಷಯವನ್ನು ಪಠ್ಯ ಕಡಿತ ಪ್ರಕ್ರಿಯೆಯಿಂದ ಕೈಬಿಡಲು ತೀರ್ಮಾನಿಸಲಾಗಿದೆ.

ಕಡಿತಗೊಳಿಸಬಹುದಾದ ಪಠ್ಯಗಳ ಕುರಿತು ಪಠ್ಯ ಪುಸ್ತಕ ರಚನಾ ಸಮಿತಿ ಮತ್ತು ಪರಿಷ್ಕರಣಾ ಸಮಿತಿಯ ಸದಸ್ಯರು ವರದಿ ನೀಡಿದ್ದು, ಇಲಾಖೆಯ ವೆಬ್‍ಸೈಟ್‍ನಲ್ಲಿ ಕಡಿತಗೊಳಿಸಿದ ಪಠ್ಯಗಳ ಮಾಹಿತಿ ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News