ಮಂತ್ರಿಗೆ ಸನ್ಮಾನ ಮಾಡಲು ಕಾಂಗ್ರೆಸ್ ದಾದಾಗಿರಿ ಮಾಡಿ ಹಣ ವಸೂಲಿ ಮಾಡಿತ್ತು: ಸಚಿವ ಈಶ್ವರಪ್ಪ

Update: 2020-10-22 12:32 GMT

ಬಳ್ಳಾರಿ, ಅ.22: ಕಾಂಗ್ರೆಸ್‍ನ ಒಬ್ಬ ಮಂತ್ರಿಗೆ ಸನ್ಮಾನ ಮಾಡಲು ದಾದಾಗಿರಿ ಮಾಡಿಕೊಂಡು ಅಂದಾಜು 60 ಲಕ್ಷ ರೂ. ಹಣವನ್ನು ಸಾರ್ವಜನಿಕರಿಂದ ದೇಣಿಗೆಯಾಗಿ ಸಂಗ್ರಹಿಸಲಾಗಿತ್ತು. ಅದನ್ನ ಮೊದಲು ವಿರೋಧಿಸಿದ್ದು ನಾನೇ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ನಗರದ ತಾಳೂರು ರಸ್ತೆಯಲ್ಲಿರುವ ಗೋವಿಂದ ಕಲ್ಯಾಣ ಮಂಟಪದಲ್ಲಿ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಜಿಲ್ಲಾ ಪ್ರಮುಖರ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ಆ ದಿನ ಬಿಜೆಪಿಯಿಂದ ನಾವು 4 ಮಂದಿ ಶಾಸಕರಿದ್ದೆವು. ನಾನು ಶಿವಮೊಗ್ಗದಿಂದ ಆಯ್ಕೆಯಾಗಿದ್ದೆ. ಬಳ್ಳಾರಿಯಲ್ಲಿ ನಮ್ಮ ಪಕ್ಷ ಇದ್ದಿರಲಿಲ್ಲ. ಆಗ ನಾನು ಬಳ್ಳಾರಿಗೆ ಬಂದಿದ್ದೆ. ಮುನ್ಸಿಪಲ್ ಮೈದಾನದಲ್ಲಿ ಒಬ್ಬ ಕಾಂಗ್ರೆಸ್ ಮಂತ್ರಿಗೆ ಅದ್ಧೂರಿಯಾಗಿ ಸನ್ಮಾನ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ಸಿಗರು ಬೆಂಗಳೂರು ರಸ್ತೆಯಲ್ಲಿರುವ ಅಂಗಡಿಗಳಿಗೆ ತೆರಳಿ ಹಣ ವಸೂಲಾತಿಗೆ ನಿಂತಿದ್ದರು. ನಾನು ಮಂತ್ರಿಗಳಿಗೆ, ವಯಸ್ಸಾದವರಿಗೆ ಸನ್ಮಾನ ಮಾಡುವುದು ಬೇಡ ಎನ್ನುವುದಿಲ್ಲ, ಆದರೆ, ನೀವು ಸಾರ್ವಜನಿಕರ ಬಳಿ ಹೋಗಿ ಈ ರೀತಿಯಾಗಿ ದೌರ್ಜನ್ಯ, ದಾದಾಗಿರಿ ಮಾಡಿ ಹಣ ವಸೂಲಾತಿ ಮಾಡುವುದು ತಪ್ಪೆಂದು ನಾನು ಪ್ರಶ್ನಿಸಿದ್ದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News