ಸಿಗಂದೂರು ವಿವಾದ ಸುಖಾಂತ್ಯ: ನ್ಯಾಯಾಲಯದ ಮಧ್ಯಸ್ಥಿಕೆಯಲ್ಲಿ ಆಡಳಿತ ಮಂಡಳಿ- ಅರ್ಚಕರ ನಡುವೆ ರಾಜಿ

Update: 2020-10-22 14:21 GMT

ಶಿವಮೊಗ್ಗ,ಅ.22: ಸಿಗಂದೂರು ಕ್ಷೇತ್ರದಲ್ಲಿ ಅರ್ಚಕರು ಹಾಗೂ ಧರ್ಮದರ್ಶಿಗಳ ನಡುವೆ ಉಂಟಾಗಿದ್ದ ವಿವಾದ ಸ್ಥಳೀಯ ಸಿವಿಲ್ ನ್ಯಾಯಾಲಯದ ಮಧ್ಯಸ್ಥಿಕೆ ಮೂಲಕ ಸುಖಾಂತ್ಯಗೊಂಡಿದೆ.

ದೇಗುಲದ ಭಕ್ತರಾದ ಸಂದೀಪ್ ಹಾಗೂ ನವೀನ್ ಜೈನ್ ಎಂಬವರು ದೇವಸ್ಥಾನದ ಪೂಜಾ ವಿಧಿವಿಧಾನಗಳಿಗೆ ಆಡಳಿತ ಮಂಡಳಿಯಿಂದ ಯಾವುದೇ ಅಡ್ಡಿಯಾಗದಂತೆ ನಿರ್ಬಂಧಕಾಜ್ಞೆ ನೀಡಬೇಕೆಂದು ಇಲ್ಲಿನ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. 

ಕೊರೋನ ಕಾರಣಕ್ಕೆ ನವರಾತ್ರಿ ಸಂದರ್ಭ ಚಂಡಿಕಾಯಾಗ ಮಾಡಲು ಆಡಳಿತ ಮಂಡಳಿ ನಿರಾಕರಿಸಿದ್ದರಿಂದ ಅರ್ಚಕರ ಬೆಂಬಲಿಗರು ದಾವೆ ಹೂಡಿದ್ದು, ಧರ್ಮದರ್ಶಿ ಡಾ.ರಾಮಪ್ಪ ಹಾಗೂ ಅವರ ಪುತ್ರ ರವಿಕುಮಾರ್, ಶೇಷಗಿರಿ ಭಟ್ ಅವರನ್ನು ಪಾರ್ಟಿ ಮಾಡಿದ್ದರು. ಪ್ರಕರಣದ ವಿಚಾರಣೆ ಮಂಗಳವಾರವೂ ನಡೆದಿತ್ತು.

ಬುಧವಾರ ಮುಂದುವರಿದ ವಿಚಾರಣೆ ಸಂದರ್ಭ ದಾವೆ ಹೂಡಿದವರು, ಧರ್ಮದರ್ಶಿ ರಾಮಪ್ಪ, ರವಿಕುಮಾರ್ ಹಾಗೂ ಶೇಷಗಿರಿಭಟ್ ಅವರನ್ನು ನ್ಯಾಯಾಲಯಕ್ಕೆ ಕರೆಸಿಕೊಂಡ ನ್ಯಾಯಾಧೀಶರಾದ ಫೆಲಿಕ್ಸ್ ಆಲ್ಫಾನ್ಸೊ ಅಂತೋನಿ ಅವರು ಮಧ್ಯಸ್ಥಿಕೆ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿದರು. ಉಭಯ ಕಡೆಯ ವಕೀಲರು ಹಾಗೂ ನ್ಯಾಯಾಲಯ ನೇಮಿಸಿದ್ದ ಮಧ್ಯಸ್ಥಿಕೆಗಾರರ ಉಪಸ್ಥಿತಿಯಲ್ಲಿ ನಡೆದ ಮಾತುಕತೆಯಲ್ಲಿ ವಿವಾದವನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಲು ತೀರ್ಮಾನಿಸಲಾಯಿತು.

ಕೋವಿಡ್-19 ಇರುವ ಈ ಕಾಲದಲ್ಲಿ ದೇವಸ್ಥಾನದ ಗರ್ಭಗುಡಿಯ ಮುಂಭಾಗದಲ್ಲಿ ಏಕಕಾಲಕ್ಕೆ 40 ಜನರನ್ನು ಮಾತ್ರ ಸೇರಿಸಬೇಕು. ಭಕ್ತರು ಮಾಸ್ಕ್ ಧರಿಸಿ ಸುರಕ್ಷಿತ ಅಂತರ ಕಾಪಾಡಿಕೊಳ್ಳಬೇಕು ಎಂಬ ಅಂಶಕ್ಕೆ ಧರ್ಮದರ್ಶಿ ರಾಮಪ್ಪ, ರವಿಕುಮಾರ್ ಹಾಗೂ ಶೇಷಗಿರಿಭಟ್ ಸಮ್ಮತಿ ಸೂಚಿಸಿದ್ದಾರೆ. ಪೂಜೆಯ ನಂತರ ಮಂಗಳಾರತಿ ತಟ್ಟೆಯನ್ನು ಅರ್ಚಕರು ಭಕ್ತರ ಬಳಿ ಕೊಂಡೊಯ್ಯುವಂತಿಲ್ಲ. ನಿರ್ದಿಷ್ಟ ಜಾಗದಲ್ಲಿ ಇಟ್ಟು ಭಕ್ತರಿಗೆ ನಮಸ್ಕರಿಸಲು ಅವಕಾಶ ನೀಡಬೇಕು. ದಸರಾ ಅಂಗವಾಗಿ ಶೇಷಗಿರಿ ಭಟ್ ಕುಟುಂಬ ಚಂಡಿಕಾಹೋಮವನ್ನು ಧರ್ಮದರ್ಶಿ ರಾಮಪ್ಪ, ರವಿಕುಮಾರ್ ಕುಟುಂಬದವರ ಉಪಸ್ಥಿತಿಯಲ್ಲಿ ನೆರವೇರಿಸಬೇಕು ಎಂಬ ಅಂಶಕ್ಕೆ ಉಭಯ ಕಡೆಯವರು ಒಪ್ಪಿಗೆ ಸೂಚಿಸಿದ್ದಾರೆ.

ದೇವಾಲಯಕ್ಕೆ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಸರಕಾರದ ಮಾರ್ಗಸೂಚಿಯನ್ವಯ ಅವಕಾಶ ನೀಡಬೇಕು. ಕೋವಿಡ್ ಪಿಡುಗಿನ ನಂತರ ಧರ್ಮದರ್ಶಿ ರಾಮಪ್ಪ, ರವಿಕುಮಾರ್ ಹಾಗೂ ಶೇಷಗಿರಿ ಭಟ್ ಅವರು ಪರಸ್ಪರ ಹೊಂದಾಣಿಕೆ ಮೂಲಕ ಪೂಜೆ ಮತ್ತಿತರ ಚಟುವಟಿಕೆ ಮುಂದುವರಿಸಿಕೊಂಡು ಹೋಗಲು ಮಧ್ಯಸ್ತಿಕೆಗಾರರ ಸಮ್ಮುಖದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮಾತುಕತೆ ಬಳಿಕ ಎರಡೂ ಕಡೆಯ ಒಪ್ಪಿಗೆಯ ಮೇರೆಗೆ ದಾವೆಯನ್ನು ಹಿಂಪಡೆಯಲಾಯಿತು. ದಾವೆದಾರರ ಪರವಾಗಿ ವಕೀಲರಾದ ರವೀಶ್ ಕುಮಾರ್, ಪ್ರತಿವಾದಿಗಳಾದ ರಾಮಪ್ಪ ಮತ್ತು ರವಿಕುಮಾರ್ ಪರವಾಗಿ ಎನ್.ವೆಂಕಟರಾಮ್, ಎಚ್.ಎನ್.ದಿವಾಕರ್, ಬಿ.ನಾಗರಾಜ, ಎಂ.ರಾಘವೇಂದ್ರ, ಕೆ.ಬಿ.ಮಹಾಬಲೇಶ್, ಶೇಷಗಿರಿ ಭಟ್ ಪರವಾಗಿ ಟಿ.ಎಸ್.ರಮಣ ಮಧ್ಯಸ್ಥಿಕೆಗಾರರಾಗಿ ವಕೀಲರಾದ ಮರಿದಾಸ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News