ರಾಷ್ಟ್ರೀಯ ಪಕ್ಷ ಸೇರುವುದರಲ್ಲಿ ಯಾವುದೇ ಗೊಂದಲವಿಲ್ಲ: ಶಾಸಕ ಶರತ್ ಬಚ್ಚೇಗೌಡ
ಬೆಂಗಳೂರು, ಅ.22: ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷ ಸೇರ್ಪಡೆ ವಿಷಯದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ ಎಂದು ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷ ಸೇರುವುದರಲ್ಲಿ ಯಾವುದೇ ಗೊಂದಲವಿಲ್ಲ. ನಮ್ಮ ತಾಲೂಕಿನ ಅಭಿವೃದ್ಧಿ ಮತ್ತು ಕಾರ್ಯಕರ್ತರ ಹಿತದೃಷ್ಟಿಯಿಂದ ನಾನು ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಶಾಶ್ವತವಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಇರುವುದು ಕಷ್ಟ ಎಂದ ಅವರು, ಇಲ್ಲಿಯವರೆಗೂ ನನಗೆ ಯಾವುದೇ ಪಕ್ಷಗಳಿಂದ ಅಧಿಕೃತ ಆಹ್ವಾನ ಬಂದಿಲ್ಲ. ಹಾಗೆಯೇ ಮುಂದಿನ ದಿನಗಳಲ್ಲಿ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳು ಬರುತ್ತಿದ್ದು, ಮಾತುಕತೆ ನಡೆಯುತ್ತಿರುವುದು ಸತ್ಯ ಎಂದರು.
ಇದೇ 25 ರಂದು ಕಾಂಗ್ರೆಸ್ ಸೇರ್ಪಡೆ ಅನ್ನುವ ವಿಚಾರ ಸತ್ಯಕ್ಕೆ ದೂರವಾಗಿದೆ. ನಾನು ನಮ್ಮ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷವು ಈಗಾಗಲೇ ತಾಲೂಕಿನಲ್ಲಿ ಹೋಬಳಿಗಳ ಮಟ್ಟದ ಸಭೆಗಳನ್ನು ನಡೆಸುತ್ತಿದ್ದು, ಅಲ್ಲಿಯೂ ಸಹ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮುಂದಿನ ದಿನಗಳಲ್ಲಿ ನಿಮಗೇ ಗೊತ್ತಾಗಲಿದೆ ಎಂದು ಶರತ್ ಬಚ್ಚೇಗೌಡ ನುಡಿದರು.