ಖಾಸಗಿ ಹಣಕಾಸು ಸಂಸ್ಥೆಗಳಿಗೆ ನಿಯಂತ್ರಣ ಹೇರುವ ಕಾಯ್ದೆಗೆ ಸಚಿವ ಸಂಪುಟ ಅಸ್ತು

Update: 2020-10-22 17:00 GMT

ಬೆಂಗಳೂರು, ಅ. 22: ಜನರಿಗೆ ಹೆಚ್ಚಿನ ಮೊತ್ತದ ಬಡ್ಡಿಯ ಆಸೆ ತೋರಿಸಿ ವಂಚಿಸುತ್ತಿರುವ ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ಚಿಟ್ ಫಂಡ್ ಸಂಸ್ಥೆಗಳ ಚಟುವಟಿಕೆಗಳಿಗೆ ಕಡಿವಾಣ ಹಾಕಲು `ಕರ್ನಾಟಕ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ವಿಧೇಯಕ-2020'ಕ್ಕೆ ಸಚಿವ ಸಂಪುಟ ಸಭೆ ಗುರುವಾರ ಅನುಮೋದನೆ ನೀಡಿದೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ. ಇತ್ತೀಚೆಗೆ ಐಎಂಎ ಸೇರಿದಂತೆ ಇನ್ನಿತರ ಕೆಲ ಹಣಕಾಸು ಸಂಸ್ಥೆಗಳು ಜನರಿಂದ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಿ ವಂಚಿಸಿರುವ ಮತ್ತು ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಇಂತಹ ಸಂಸ್ಥೆಗಳ ಹಣಕಾಸು ಚಟುವಟಿಕೆಗಳನ್ನು ನಿರ್ಬಂಧಿಸಲು ವಿಧೇಯಕ ಜಾರಿಗೆ ಮುಂದಾಗಿದೆ ಎಂದು ಗೊತ್ತಾಗಿದೆ.

ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿಯ ಆಸೆ ತೋರಿಸಿ ವಂಚಿಸುವ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ಮಸೂದೆ ಇದಾಗಿದ್ದು, ಉದ್ದೇಶಿತ ಕಾನೂನಿಗೆ ನಿಯಮಗಳನ್ನು ರೂಪಿಸಲು ಸಂಪುಟ ಸಭೆಯು ಒಪ್ಪಿಗೆ ಸೂಚಿಸಿದೆ. ಈಗಾಗಲೇ ಕೇಂದ್ರ ಸರಕಾರ ಈ ಮಸೂದೆಯನ್ನು ಜಾರಿಗೊಳಿಸಿದ್ದು, ಕೇಂದ್ರದ ನಿರ್ಣಯದ ಆಧಾರದ ಮೇಲೆ ರಾಜ್ಯ ಸರಕಾರವು ಜಾರಿಗೊಳಿಲು ತೀರ್ಮಾನಿಸಿ, ಇಂದು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ವಿಧೇಯಕ-2020'ಕ್ಕೆ ನಿಯಮಗಳನ್ನು ರೂಪಿಸಿದ ನಂತರ ಜಾರಿಗೊಳಿಸಲಾಗುವುದು. ಈ ಕಾಯ್ದೆ ಜಾರಿಗೆ ಬಂದರೆ ಅಕ್ರಮ ಠೇವಣಿ, ಹಣಕಾಸು ವ್ಯವಹಾರ ಭೀತಿಯನ್ನು ನಿಭಾಯಿಸಲು ಈ ಮಸೂದೆ ಸಹಾಯವಾಗಲಿದೆ. ಅಲ್ಲದೆ, ಬಡ್ಡಿ ಆಸೆ ತೊರಿಸಿ ಬಡ ಜನರನ್ನು ವಂಚಿಸುವ ಪ್ರಕರಣಗಳ ತಡೆಗೆ ಅನುಕೂಲವಾಗಲಿದೆ ಎಂದು ಸರಕಾರದ ಅಭಿಪ್ರಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News