''ಈಶ್ವರಪ್ಪನವರೇ, ಹರಕುಬಾಯಿ ಯಾರದ್ದೆಂದು ನಮಗೆ ಚೆನ್ನಾಗಿ ಗೊತ್ತಿದೆ''

Update: 2020-10-22 16:28 GMT

ಬೆಂಗಳೂರು, ಅ. 22: ತಮ್ಮನ್ನು ಉಚ್ಛಾಟಿಸಬೇಕು ಎಂಬ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ತನ್ನ ಅಭಿಮಾನಿಯೊಬ್ಬ ಮಾಡಿದ ಪೋಸ್ಟ್ ಅನ್ನು ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಳ್ಳುವ ಮೂಲಕ ವಿಜಯಪುರ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರೋಕ್ಷವಾಗಿ ಆಕ್ರೋಶ ಹೊರಹಾಕಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಸಂಬಂಧ ಬಹಿರಂಗ ಹೇಳಿಕೆ ನೀಡಿದ ಶಾಸಕ ಯತ್ನಾಳ್ ಅವರನ್ನು ಕೂಡಲೇ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಕೆ.ಎಸ್.ಈಶ್ವರಪ್ಪ ನಿನ್ನೆ ಕೊಪ್ಪಳದಲ್ಲಿ ಹೇಳಿಕೆ ನೀಡಿದ್ದರು. ಇದಕ್ಕೆ ಯತ್ನಾಳ್ ಅಭಿಮಾನಿಯೊಬ್ಬ, `ಈಶ್ವರಪ್ಪನವರೇ ಹರಕುಬಾಯಿ ಯಾರದ್ದು ಅಂತ ನಮಗೆ ಚೆನ್ನಾಗಿ ಗೊತ್ತಿದೆ. ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲು ನೀವು ಹೇಳುವುದಾದರೆ... ನಿಮ್ಮನ್ನು ಮೊದಲು ಉಚ್ಛಾಟನೆ ಮಾಡಬೇಕು. ಏಕೆಂದರೆ ತಮ್ಮ ರಾಯಣ್ಣ ಬ್ರಿಗೇಡ್ ಮರೆತು ಹೋಯಿತಾ..!!' ಎಂದು ಪ್ರಶ್ನಿಸಿದ್ದ.

ಅದನ್ನು ಶಾಸಕ ಬಸವಗೌಡ ಪಾಟೀಲ್ ಯತ್ನಾಳ್ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇದಕ್ಕೆ ಯತ್ನಾಳ್ ಬೆಂಬಲಿಗರು ಪ್ರತಿಕ್ರಿಯಿಸಿದ್ದು, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ರೀತಿಯಲ್ಲಿ ರಾಜ್ಯದಲ್ಲಿ ಯತ್ನಾಳ್ ಅಥವಾ ಅನಂತ ಕುಮಾರ್ ಹೆಗಡೆ ಮುಖ್ಯಮಂತ್ರಿ, ಗೃಹ ಸಚಿವರು ಆಗಬೇಕು ಎಂದು ಪೋಸ್ಟ್ ಮಾಡಿದ್ದು, ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News