×
Ad

ಜಂಬೂಸವಾರಿ ರಿಹರ್ಸಲ್ ವೇಳೆ ಬೆಚ್ಚಿದ ಅಶ್ವಪಡೆ: ಕೆಳಕ್ಕೆ ಬಿದ್ದ ಪೊಲೀಸ್ ಸಿಬ್ಬಂದಿ

Update: 2020-10-22 22:48 IST

ಮೈಸೂರು,ಅ.22: ವಿಶ್ವವಿಖ್ಯಾತ ಮೈಸೂರು ದಸರಾ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಗಜಪಡೆ ಹಾಗೂ ಅಶ್ವಾರೋಹಿ ದಳಕ್ಕೆ ಪೊಲೀಸ್ ಬ್ಯಾಂಡ್ ಸಮೇತ ತಾಲೀಮು ನಡೆಸಲಾಯಿತು.

ಕಳೆದ ವರ್ಷ ತಾಲೀಮು ಸಂದರ್ಭ ಕುಶಾಲತೋಪು ಸಿಡಿಸುವ ವೇಳೆ ಬರುವ ಭಾರೀ ಶಬ್ದಕ್ಕೆ ಸಾಕಷ್ಟು ಆನೆಗಳು ಬೆಚ್ಚಿದ್ದವು. ಕೊನೆ ಕೊನೆಗೆ ಶಬ್ದಕ್ಕೆ ಹೊಂದಿಕೊಂಡಿದ್ದವು. ಈ ಬಾರಿ ಕೂಡ ಯಾವುದೇ ಆನೆಗಳು ಶಬ್ದಕ್ಕೆ ಬೆಚ್ಚಿ ಬಿದ್ದಿಲ್ಲ.

ಅ.26ರಂದು ಜಂಬೂಸವಾರಿ ಮೆರವಣಿಗೆ ಹೊರಡುವ ಮುನ್ನ ರಾಷ್ಟ್ರಗೀತೆ ಮೊಳಗಲಿದ್ದು, ಆ ವೇಳೆ 21 ಸುತ್ತು ಕುಶಾಲತೋಪು ಸಿಡಿಸಲಾಗುವುದು. ಜಂಬೂಸವಾರಿ ವೇಳೆ ಕುಶಾಲತೋಪಿನ ಶಬ್ದಕ್ಕೆ ಆನೆಗಳು, ಕುದುರೆಗಳು ವಿಚಲಿತವಾಗದೆ ಇರಲಿ ಎಂಬ ಕಾರಣಕ್ಕೆ ಪ್ರತಿ ವರ್ಷ ಒಟ್ಟು ಮೂರು ಬಾರಿ ತಾಲೀಮು ನಡೆಸಲಾಗುತ್ತದೆ.

ಜಂಬೂಸವಾರಿಗೆ ಇನ್ನೂ ನಾಲ್ಕೇ ದಿನ ಬಾಕಿ ಇದ್ದು ಕೊರೋನ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಈ ಬಾರಿ ಅರಮನೆ ಆವರಣದೊಳಗೆ ಮಾತ್ರ ಜಂಬೂ ಸವಾರಿ ನಡೆಯಲಿದೆ. ಇಂದಿನಿಂದ ಜಂಬೂ ಸವಾರಿ ರಿಹರ್ಸಲ್ ಪ್ರಾರಂಭವಾಗಿದ್ದು, ಗಜಪಡೆ,ಅಶ್ವಾರೋಹಿದಳ, ಶಸ್ತ್ರ ಸಜ್ಜಿತ ಪೊಲೀಸರು ಏಕ ಕಾಲದಲ್ಲಿ ತಾಲೀಮು ನಡೆಸಿದರು. ಅರಮನೆ ಆವರಣದಲ್ಲಿ ತಾಲೀಮು ನಡೆದಿದ್ದು, ತಂಡಗಳು ಜಂಬೂ ಸವಾರಿ ದಿನ ನಡೆಯುವ ಪ್ರಕ್ರಿಯೆಗಳ ರಿಹರ್ಸಲ್ ನಡೆಸಿವೆ. 

ಪೊಲೀಸ್ ಬ್ಯಾಂಡ್ ಗಳಿಂದಲೂ ರಿಹರ್ಸಲ್ ನಡೆದಿದ್ದು, ತಾಲೀಮಿನ ವೇಳೆ ಅಶ್ವಗಳು ವಿಚಲಿತಗೊಂಡಿವೆ. ಅಶ್ವಾರೋಹಿ ಪಡೆಯ ಕೆಲವು ಅಶ್ವಗಳು ಗಜಪಡೆ ಕಂಡು ಗಾಬರಿಗೊಂಡಿವೆ. ವಿಚಲಿತಕೊಂಡ ಕುದುರೆ ಹಿಮ್ಮುಖವಾಗಿ ಚಲಿಸಿದ್ದು ಅಶ್ವಾರೋಹಿಗಳಾದ ಪೊಲೀಸ್ ಸಿಬ್ಬಂದಿಗಳು ಕೆಲವರು ಕೆಳಗೆ ಬಿದ್ದ ಘಟನೆಯೂ ನಡೆಯಿತು. ಮೊದಲ ದಿನ ಜಂಬೂ ಸವಾರಿ ರಿಹರ್ಸಲ್ ನಲ್ಲಿ ಗಜಪಡೆಯೊಂದಿಗೆ ಅಶ್ವಾರೋಹಿ ಪಡೆಯೂ ಭಾಗಿಯಾಗಿತ್ತು. ಆದರೂ ಇಂದು ವಿಚಲಿತಗೊಂಡಿದೆ. ಇನ್ನೆರಡು ದಿನ ತಾಲೀಮು ನಡೆಸಲಾಗುತ್ತಿದ್ದು, ಸರಿ ಹೋಗಬಹುದು ಎಂದು ಪೊಲೀಸರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News