ಮೈಸೂರು: ನಾಲ್ಕನೇ ದಿನಕ್ಕೆ ಕಾಲಿಟ್ಟ ದಸಂಸ ಅನಿರ್ಧಿಷ್ಟಾವಧಿ ಪ್ರತಿಭಟನೆ

Update: 2020-10-22 17:55 GMT

ಮೈಸೂರು,ಅ.22: ಭ್ರಷ್ಟಾಚಾರದಲ್ಲಿ ತೊಡಗಿರುವ ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಟಿ.ಎಸ್.ಸುಬ್ರಮಣ್ಯ ಅವರ ಭಾವಚಿತ್ರದೊಂದಿಗೆ ಅಣಕು ಶವ ಇಟ್ಟು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕಳೆದ ನಾಲ್ಕು ದಿನಗಳಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಾಲ್ಕನೆ ದಿನವಾದ ಗುರುವಾರ ಟಿ.ಎಸ್.ಸುಬ್ರಮಣ್ಯ ಅವರ ಭಾವಚಿತ್ರವನ್ನು ಶವದ ರೀತಿಯಲ್ಲಿ ಮಾಡಿದ ಬೊಂಬೆಗೆ ಅಂಟಿಸಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ಇಟ್ಟು ತಮ್ಮ ಆಕ್ರೋಶ ಹೊರಹಾಕಿದರು.

ಇದೇ ವೇಳೆ ಮಾತನಾಡಿದ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಅರಮನೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಉಪನಿರ್ದೇಶಕರಾಗಿರುವ ಟಿ.ಎಸ್.ಸುಬ್ರಮಣ್ಯ ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದಾರೆ. ಜೊತೆಗೆ ಕಾನೂನು ಬಾಹಿರವಾಗಿ ಮೂರು ಬಾರಿ ಪದೋನ್ಮತಿ ಪಡೆದಿದ್ದಾರೆ. ಇವರ ಭ್ರಷ್ಟಾಚಾರಕ್ಕೆ ದಾಖಲೆಗಳನನ್ನು ನೀಡಲಾಗಿದೆ. ಜೊತೆಗೆ ಇವರ ಮೇಲೆ ಲೋಕಾಯುಕ್ತ ತನಿಖೆ ಕೂಡ ನಡೆಯುತ್ತಿದೆ. ಇಷ್ಟೆಲ್ಲಾ ಹಗರಣಗಳಲ್ಲಿ ತೊಡಗಿರುವ ಟಿ.ಎಸ್.ಸುಬ್ರಮಣ್ಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಕ್ಯಾರೆ ಎನ್ನದ ರಾಜ್ಯ ಸರ್ಕಾರ ಮತ್ತು  ಜಿಲ್ಲಾಡಳಿತ ಕೂಡ ಸತ್ತುಹೋಗಿದೆ ಎಂದು ಹೇಳಿದರು.

ಅರಮನೆ ಉಪನಿರ್ದೇಶಕರ ವಿರುದ್ಧ ಕ್ರಮಕೈಗೊಳ್ಳುವವರೆಗೂ ನಮ್ಮ ಹೋರಾಟ ನಿಲ್ಲವುದಿಲ್ಲ, ಇದು ಇನ್ನು ಮುಂದೆ ಮತ್ತಷ್ಟು ಉಗ್ರರೂಪ ತಾಳಲಿದೆ ಎಂದು ಎಚ್ಚರಿಕೆಯನ್ನು ನೀಡಿದರು.

ಅರಮನೆ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಅವರ ಅಣಕು ಶವದ ಮುಂದೆ ಅವರ ಪತ್ನಿ ರೋಧಿಸುತ್ತಿರುವಂತೆ ದಸಂಸ ಕಾರ್ಯಕರ್ತರೊಬ್ಬರು ಕುಳಿತು ಎಲ್ಲರ ಗಮನ ಸೆಳೆದರು. ಇದೇ ವೇಳೆ ಮಹಿಳಾ ಕಲಾವಿದರು ಭಜನೆಯನ್ನು ಸಹ ನಡೆಸಿದರು.

ಪ್ರತಿಭಟನೆಯಲ್ಲಿ ಚೋರನಹಳ್ಳಿ ಶಿವಣ್ಣ, ಕೆ.ವಿ.ದೇವೇಂದ್ರ, ಎಡದೊರೆ ಮಹಾದೇವಯ್ಯ, ಕಿರಂಗೂರು ಸ್ವಾಮಿ, ಅರಸಿನಕೆರೆ ಶಿವರಾಜು, ಉಮಾಮಹಾದೇವ್ ಸೇರಿದಂತೆ ಹಲವರು ಭಾಗಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News