ಕುಂಚಿ ಕೊರವ ಜನಾಂಗಕ್ಕೆ ಸಿಗದ ನಿವೇಶನ: ಕೆಸರು ಗದ್ದೆಯಂಥ ಗುಡಿಸಲಿನಲ್ಲಿಯೇ ಜೀವನ ಸಾಗಾಟ

Update: 2020-10-22 18:06 GMT

ಯಾದಗಿರಿ, ಅ.22: ಯಾದಗಿರಿ ಜಿಲ್ಲೆಯ ಕೆಂಭಾವಿಯ ಕೆಂಗೇರಿಯಲ್ಲಿ ವಾಸಿಸುತ್ತಿರುವ ಕುಂಚಿ ಕೊರವ ಜನಾಂಗಕ್ಕೆ ಹಕ್ಕು ಪತ್ರ ದೊರೆತರೂ ನಿವೇಶನ ಸಿಗದೆ, ಕೇಸರು ಗದ್ದೆಯಂಥ ಗುಡಿಸಲಿನಲ್ಲಿಯೇ ಮಕ್ಕಳು, ಬಾಣಂತಿಯರು, ವಯಸ್ಸಾದವರನ್ನು ಕಟ್ಟಿಕೊಂಡು ಜೀವನ ಸಾಗಿಸುವಂತಹ ಪರಿಸ್ಥಿತಿ ಬಂದೊದಗಿದೆ.     

ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಕೆಂಗೇರಿಯಲ್ಲಿ 25ಕ್ಕೂ ಹೆಚ್ಚು ಗುಡಿಸಲುಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿರುವ ಈ ಕುಟುಂಬಗಳು ಅಕ್ಷರಶಃ ನಲುಗಿ ಹೋಗಿವೆ. ಮಳೆಯ ಆರ್ಭಟದ ಮಧ್ಯೆಯೇ ಗುಡುಗು, ಮಿಂಚು, ಸಿಡಿಲು ಏಕಾಏಕಿ ಹೊಡೆದಾಗ ಗುಡಿಸಲಲ್ಲಿ ಇರುವ ಮಕ್ಕಳು, ಮಹಿಳೆಯರು ಆತಂಕಕ್ಕ ಒಳಗಾಗುತ್ತಾರೆ.

ಇದರ ಮಧ್ಯೆಯೇ ತಮ್ಮ ಗುಡಿಸಲುಗಳಿಗೆ ಹೋಗಲು ಸುಗಮವಾದ ದಾರಿಯಿಲ್ಲದೆ ಸುಮಾರು ಅರ್ಧ ಕಿ.ಮೀ.ಗಿಂತಲೂ ಹೆಚ್ಚು ಸುತ್ತು ಬಳಸಿ ತಲುಪಬೇಕಾದ ಸ್ಥಿತಿ ಇದೆ. ಮನೆಗಳಲ್ಲಿ ಸಂಪೂರ್ಣವಾಗಿ ನೀರು ನಿಂತು ಅಡುಗೆ ಮಾಡಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ. ಇದರಿಂದ, ಉಪವಾಸದಲ್ಲಿ ಜೀವನ ಕಳೆಯುವಂತಾಗಿದೆ.

ಈ ಜನಾಂಗದವರ ಮೂಲ ಕಸಬು ಕೂದಲು ಸಂಗ್ರಹಿಸಿ ಮಾರಾಟ ಮಾಡುವುದು, ಪ್ಲಾಸ್ಟಿಕ್ ಸಾಮಾನು ಹಾಗೂ ಇನ್ನಿತರ ಸಣ್ಣಪುಟ್ಟ ವಸ್ತುಗಳನ್ನು ಮಾರುವುದಾಗಿವೆ. ಬೆಳಗ್ಗೆ ಎದ್ದು ಕೆಲಸಕ್ಕೆ ಹೋದರೆ ಬರುವುದು ರಾತ್ರಿ ಸಮಯವೇ. ಕೆಲಸವಿಲ್ಲದಿದ್ದರೆ ಉಪವಾಸವೇ ಗತಿ.

‘ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಯೋಜನೆಯಡಿ 25 ಕುಟುಂಬಗಳಿಗೆ ಎರಡು ವರ್ಷಗಳ ಹಿಂದೆಯೇ ನಿವೇಶನ ಹಕ್ಕು ಪತ್ರ ನೀಡಲಾಗಿದ್ದರೂ ತಾಂತ್ರಿಕ ತೊಂದರೆಯಿಂದ ಇನ್ನೂವರೆಗೂ ನಿವೇಶಗಳನ್ನು ತೋರಿಸಿಲ್ಲ. ಅಧಿಕಾರಿಗಳೂ ಮುತುವರ್ಜಿ ವಹಿಸುತ್ತಿಲ್ಲ.’

-ಭೀಮನಗೌಡ ಕಾಚಾಪುರ, ಸಗರನಾಡು ಜಿಲ್ಲಾ ರೈತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News