×
Ad

ಕಚೇರಿಯಲ್ಲಿ ಕುರ್ಚಿಗಾಗಿ ಅಧಿಕಾರಿಗಳಿಬ್ಬರ ಕಿತ್ತಾಟ

Update: 2020-10-22 23:39 IST

ಕಲುಬರ್ಗಿ, ಅ.22: ಕಚೇರಿಯಲ್ಲಿ ಒಂದೇ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅಧಿಕಾರಿಗಳಿಬ್ಬರ ನಡುವೆ ಕಿತ್ತಾಟ ನಡೆದಿದ್ದು, ಈ ಸಂಬಂಧ ಬಿರಾದಾರ್ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.

ಬಿಸಿಎಂ ಅಧಿಕಾರಿಗಳಾಗಿರುವ ರಮೇಶ್ ಸಂಗಾ ಮತ್ತು ದೇವಿಂದ್ರ ಬಿರಾದಾರ್ ಎಂಬುವರ ನಡುವೆ ಈ ಜಗಳ ನಡೆದಿದೆ.

ಯಾವುದೇ ಆದೇಶ ಇಲ್ಲದೆ, ತಮ್ಮ ಕುರ್ಚಿ ಮೇಲೆ ಕುಳಿತಿದ್ದಾರೆ ಎಂದು ರಮೇಶ್ ಸಂಗಾ ವಿರುದ್ಧ ದೇವಿಂದ್ರ ಬಿರಾದಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿಂದೆ ಜಿಲ್ಲಾ ಬಿಸಿಎಂ ಅಧಿಕಾರಿಯಾಗಿದ್ದ ರಮೇಶ್ ಸಂಗಾ ಅವರನ್ನು ಇತ್ತೀಚಿಗೆ ಸರಕಾರ ವರ್ಗಾವಣೆಗೊಳಿಸಿ ಆ ಜಾಗಕ್ಕೆ ದೇವಿಂದ್ರ ಬಿರಾದಾರ್ ಅವರನ್ನು ನೇಮಕ ಮಾಡಿ ಸರಕಾರ ಆದೇಶಿಸಿತ್ತು. ರಮೇಶ್ ಸಂಗಾ ಅವರು, ವರ್ಗಾವಣೆ ಪ್ರಶ್ನಿಸಿ ಕೆಎಟಿಗೆ ಮೋರೆ ಹೋಗಿದ್ದರು.

ತದನಂತರ, ರಮೇಶ್ ಸಂಗಾ ಅವರು ಕೆಎಟಿ ತಮ್ಮ ಪರವಾಗಿ ಆದೇಶ ನೀಡಿದೆ ಎಂದು ಕಚೇರಿಗೆ ಆಗಮಿಸಿದರು. ಆದರೆ, ವರ್ಗಾವಣೆ ಆದೇಶವಿಲ್ಲದೇ ತಾವು ಕುರ್ಚಿ ಬಿಟ್ಟು ಕೊಡುವುದಿಲ್ಲ ಎಂದು ಅಧಿಕಾರಿ ದೇವಿಂದ್ರ ಬಿರಾದಾರ್ ವಾಗ್ವಾದ ನಡೆಸಿದರು.

ವಿಶೇಷ ಎಂದರೆ, ಬುಧವಾರ ಒಂದೇ ಕಚೇರಿಯಲ್ಲಿ ಒಂದೇ ಕಡೆ ಇಬ್ಬರು ಅಧಿಕಾರಿಗಳು ಕುಳಿತು ಆಡಳಿತ ನಡೆಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರಗಳು ವೈರಲ್ ಆಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News