''ಡಿ.10ರೊಳಗೆ ಎಸ್ಟಿ ಮೀಸಲಾತಿ ಹೆಚ್ಚಿಸದಿದ್ದರೆ ವಾಲ್ಮೀಕಿ ಸಮುದಾಯದ ಸಚಿವರು, ಶಾಸಕರ ರಾಜೀನಾಮೆ''

Update: 2020-10-23 14:07 GMT

ಬೆಂಗಳೂರು, ಅ.23: ವಾಲ್ಮೀಕಿ ಸಮುದಾಯದಕ್ಕೆ ಶೇ.7.5ರಷ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡಿ.10ರೊಳಗೆ ಸೂಕ್ತ ತೀರ್ಮಾನ ಕೈಗೊಳ್ಳದಿದ್ದರೆ ಬಿಜೆಪಿಯಲ್ಲಿರುವ ವಾಲ್ಮೀಕಿ ಸಮುದಾಯದ ಸಚಿವರು, ಶಾಸಕರು ರಾಜೀನಾಮೆ ನೀಡಲು ಹಿಂಜರಿಯುವುದಿಲ್ಲವೆಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಾಸಕ ರೇಣುಕಾಚಾರ್ಯ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕೈಗೊಂಡಿದ್ದ ಆಹೋರಾತ್ರಿ ಉಪವಾಸ ಸತ್ಯಾಗ್ರಹವನ್ನು ಚುನಾವಣೆ ನೀತಿ ಸಂಹಿತೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ನಮ್ಮ ಸಮುದಾಯದ ನಾಯಕರು ಮಾಡಿಕೊಂಡ ಮನವಿ ಮೇರೆಗೆ ಹಿಂದಕ್ಕೆ ಪಡೆದಿದ್ದೇನೆಂದು ತಿಳಿಸಿದರು.

ವಾಲ್ಮೀಕಿ ಸಮುದಾಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಸರ್ವತೋಮುಖ ಅಭಿವೃದ್ದಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡುವುದು ಸರಕಾರದ ಕರ್ತವ್ಯವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಅರಿವಿದ್ದು, ಅವರ ಮೇಲೆ ಸಮುದಾಯಕ್ಕೆ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.

ಈ ವೇಳೆ ಶಾಸಕ ರಾಜುಗೌಡ ಮಾತನಾಡಿ, ಎಸ್ಟಿ ಮೀಸಲಾತಿ ಹೆಚ್ಚಳಕ್ಕಾಗಿ ಪ್ರಸನ್ನಾನಂದ ಸ್ವಾಮೀಜಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು. ಆದರೆ, ಕೋವಿಡ್, ನೆರೆ ಹಾವಳಿ ಹಾಗೂ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಸತ್ಯಾಗ್ರಹ ಕೈಬಿಡುವಂತೆ ವಾಲ್ಮೀಕಿ ಸಮುದಾಯದ ಎಲ್ಲ ನಾಯಕರು ಮನವಿ ಮಾಡಿಕೊಂಡೆವು. ನಮ್ಮ ಮಾತಿಗೆ ಒಪ್ಪಿ ಸತ್ಯಾಗ್ರಹವನ್ನು ಕೈಬಿಟ್ಟಿದ್ದಾರೆಂದು ತಿಳಿಸಿದರು.

ವಾಲ್ಮೀಕಿ ಸಮುದಾಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲೆ ವಿಶ್ವಾಸವಿದೆ. ಅವರು ಕೊಟ್ಟ ಮಾತನ್ನು ತಪ್ಪುವವರಲ್ಲ. ಹೀಗಾಗಿ ಚುನಾವಣಾ ನೀತಿ ಸಂಹಿತೆ ಬಳಿಕ ಮೀಸಲಾತಿ ಹೆಚ್ಚಳ ಸಂಬಂಧ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ವೇಳೆ ಶಾಸಕರು, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News