ಮೈಸೂರು ಡಿಸಿ ದಿಢೀರ್ ವರ್ಗಾವಣೆ ವಿವಾದ: ವಿಚಾರಣೆ ನ.3ಕ್ಕೆ ಮುಂದೂಡಿದ ಸಿಎಟಿ ಕೋರ್ಟ್

Update: 2020-10-23 14:39 GMT

ಬೆಂಗಳೂರು, ಅ.23: ಮೈಸೂರು ನಗರ ಜಿಲ್ಲಾಧಿಕಾರಿ ಹುದ್ದೆಗೆ ರೋಹಿಣಿ ಸಿಂಧೂರಿ ನೇಮಕ ಮಾಡಲು ಬಿ.ಶರತ್ ಅವರನ್ನು ಅವಧಿಪೂರ್ವವಾಗಿ ವರ್ಗಾವಣೆ ಮಾಡಿದ್ದ ರಾಜ್ಯ ಸರಕಾರದ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ) ನ.3ಕ್ಕೆ ಮುಂದೂಡಿದೆ.

ವರ್ಗಾವಣೆ ಪ್ರಶ್ನಿಸಿ ಹಿಂದಿನ ಜಿಲ್ಲಾಧಿಕಾರಿ ಬಿ. ಶರತ್ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ಸಿಎಟಿ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎ.ಎಸ್ ಪೊನ್ನಣ್ಣ ವಾದ ಮಂಡಿಸಿ, ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ. ಶರತ್ ಅವರನ್ನು ದುರುದ್ದೇಶದಿಂದ ವರ್ಗಾವಣೆ ಮಾಡಿದೆ. ನಿಯಮಾನುಸಾರ 2 ವರ್ಷಕ್ಕಿಂತ ಮುಂಚೆ ವರ್ಗಾವಣೆ ಮಾಡುವಂತಿಲ್ಲ. ವರ್ಗಾವಣೆಗೆ ಮುನ್ನ ಸಲಹಾ ಸಮಿತಿ ಜೊತೆ ಚರ್ಚಿಸಿಲ್ಲ. ಹೀಗಾಗಿ ಶರತ್ ಅವರ ಅವಧಿಪೂರ್ವ ವರ್ಗಾವಣೆ ನಿಯಮ ಬಾಹಿರ ಎಂದು ಆರೋಪಿಸಿದರು.

ಸರಕಾರದ ಪರ ವಕೀಲರು ವರ್ಗಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ನ.3ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ಆಗಸ್ಟ್ 28 ರಂದು ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ಐಎಎಸ್ ಅಧಿಕಾರಿ ಬಿ. ಶರತ್ ಅವರನ್ನು ನಿಯೋಜಿಸಿ ಸರಕಾರ ಆದೇಶ ಹೊರಡಿಸಿತ್ತು. ಆದರೆ, ತಿಂಗಳು ಮುಗಿಯುವ ಮೊದಲೇ ಬಿ. ಶರತ್ ಅವರನ್ನು ವರ್ಗಾಯಿಸಿದ್ದ ಸರಕಾರ ಈ ಹುದ್ದೆಗೆ ರೋಹಿಣಿ ಸಿಂಧೂರಿ ಅವರನ್ನು ನಿಯೋಜಿಸಿ ಆದೇಶಿಸಿತ್ತು. ಬಿ. ಶರತ್ ಅವರನ್ನು ತಿಂಗಳು ಮುಗಿಯುವ ಮೊದಲೇ ವರ್ಗಾವಣೆ ಮಾಡಿದ್ದನ್ನು ಖಂಡಿಸಿ ಮೈಸೂರಿನ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಆ ಬಳಿಕ ಅಧಿಕಾರಿ ಬಿ. ಶರತ್ ಸರಕಾರದ ವರ್ಗಾವಣೆ ಪ್ರಶ್ನಿಸಿ ಸಿಎಟಿ ಮೆಟ್ಟಿಲೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News