ಸೋಲಿನ ಭೀತಿಯಿಂದ ಮತದಾರರಿಗೆ ಬೆದರಿಕೆವೊಡ್ಡುತ್ತಿರುವ ಮುನಿರತ್ನ: ಪ್ರಿಯಾಂಕ್ ಖರ್ಗೆ ಆರೋಪ

Update: 2020-10-23 14:48 GMT

ಬೆಂಗಳೂರು, ಅ. 23: `ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಬಿಜೆಪಿ, ಆರೆಸ್ಸೆಸ್ ಬೆಂಬಲ ಸಿಗುತ್ತಿಲ್ಲ. ಹೀಗಾಗಿ ಅವರಿಗೆ ಸೋಲಿನ ಭೀತಿ ಆವರಿಸಿದ್ದು, ಮತದಾರರಿಗೆ ಬೆದರಿಕೆವೊಡ್ಡುತ್ತಿದ್ದಾರೆ' ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಆರೋಪಿಸಿದ್ದಾರೆ.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆರ್.ಆರ್.ನಗರ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಮತದಾರರನ್ನು ಭಯಬೀತರನ್ನಾಗಿ ಮಾಡುತ್ತಿದ್ದಾರೆ. ಹಕ್ಕುಪತ್ರ ಹಿಂಪಯುತ್ತೇವೆ, ಕುಡಿಯುವ ನೀರು ನೀಡುವುದಿಲ್ಲ, ಮನೆ ಕೊಡುವುದಿಲ್ಲ ಎಂದು ಬೆದರಿಕೆ ಹಾಕಲಾಗುತ್ತಿದೆ. ಇದನ್ನು ಕಾಂಗ್ರೆಸ್ ಮೇಲೆ ಆರೋಪ ಹೊರಿಸಲಾಗುತ್ತಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ವಿರುದ್ಧ ಆಯೋಗ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದರು.

ಆರ್.ಆರ್.ನಗರ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ನಡುವೆ ಅಲ್ಲ. ಬದಲಿಗೆ ಇದು ಆರ್.ಆರ್.ನಗರ ಕ್ಷೇತ್ರದ ಜನರ ಸ್ವಾಭಿಮಾನದ ಚುನಾವಣೆ ಎಂದು ಬಣ್ಣಿಸಿದ ಪ್ರಿಯಾಂಕ್ ಖರ್ಗೆ, ಆರ್.ಆರ್.ನಗರದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಬಿಜೆಪಿಯವರೇ ಈ ರೀತಿಯ ವಾತಾವರಣ ಸೃಷ್ಟಿಸಿದ್ದಾರೆ. `ಬಳ್ಳಾರಿ ವಾತಾವರಣ' ಸೃಷ್ಟಿಸಿದ್ದು ಕಾಂಗ್ರೆಸ್ ಪಕ್ಷವಲ್ಲ ಎಂದು ತಿರುಗೇಟು ನೀಡಿದರು.

ಚುನಾವಣಾ ಆಯೋಗದ ಮೇಲೆ ಮುನಿರತ್ನಗೆ ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಿದ ಅವರು, ಪಾರದರ್ಶಕ, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಹೊರಗಿನವರು ಬರಬಾರದು ಎಂದರೆ ಬಿಜೆಪಿ ಪರಆರೆಸ್ಸೆಸ್ನವರು ಪ್ರಚಾರ ಮಾಡುವುದಿಲ್ಲವೇ. ವಿಜಯೇಂದ್ರ ಶಿರಾ ಕ್ಷೇತ್ರದಲ್ಲಿ ಏನು ಕೆಲಸ ಮಾಡುತ್ತಿದ್ದಾರೆಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News