ಕೊರೋನ ಸೋಂಕು ದೇಶಕ್ಕೆ ಹಂಚಿದ್ದೆ ಕೇಂದ್ರ ಸರಕಾರ: ಡಿ.ಕೆ.ಶಿವಕುಮಾರ್

Update: 2020-10-23 14:54 GMT

ಬೆಂಗಳೂರು, ಅ.23: ಕೇಂದ್ರ ಸರಕಾರ ಬಿಹಾರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಉಚಿತ ಕೊರೋನ ಲಸಿಕೆ ನೀಡುವುದಾಗಿ ಹೇಳಿದೆ. ಮೊದಲು ಕೊರೋನ ಸೋಂಕಿಗೆ ಲಸಿಕೆ ತಯಾರು ಮಾಡಿರುವುದಾಗಿ ಹೇಳಲಿ. ಈ ಸೋಂಕನ್ನು ದೇಶದಲ್ಲಿ ಹಂಚಿದ್ದೇ ಕೇಂದ್ರ ಸರಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಶುಕ್ರವಾರ ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರವಾಗಿ ಚುನಾವಣಾ ಪ್ರಚಾರ ನಡೆಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಸಂದರ್ಭದಲ್ಲಿ ಸರಕಾರ ಜನರಿಗೆ ಏನೆಲ್ಲಾ ಭರವಸೆ ಕೊಟ್ಟಿತ್ತು. ಗಾಣಿಗ, ಸವಿತಾ ಸಮಾಜದವರಿಗೆ 5 ಸಾವಿರ ರೂ.ಕೊಡುತ್ತೇವೆ ಎಂದು ಹೇಳಿ ಕೊಟ್ಟರೇ? ಬ್ಯಾಂಕುಗಳಿಂದ ಪಡೆದಿರುವ ಸಾಲ ಪಾವತಿಯ ಅವಧಿಯನ್ನಾದರೂ ವಿಸ್ತರಿಸಿದ್ರಾ? ತೆರಿಗೆ ಪ್ರಮಾಣವನ್ನು ಏನಾದರೂ ಕಡಿಮೆ ಮಾಡಿದ್ರಾ? ಜೀವ ಇದ್ದರೆ ಜೀವನ, ಮೊದಲು ಈ ಬಗ್ಗೆ ಸರಕಾರ ಆಲೋಚನೆ ಮಾಡಲಿ ಎಂದು ಹೇಳಿದರು.

ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ಯಾವ ರೀತಿ ನಡೆಯಿತು ಎಂಬುದು ಎಲ್ಲರೂ ನೊಡಿದ್ದಾರೆ. ಗೌರವಯುತವಾಗಿ ಅಂತ್ಯಕ್ರಿಯೆ ನಡೆಸಲು ಅವಕಾಶ ನೀಡಿಲ್ಲ, ಕುಟುಂಬ ಸದಸ್ಯರು ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿಲ್ಲ. ವಿಶೇಷ ವಿಮಾನದ ಮೂಲಕ ಅವರ ಮೃತದೇಹವನ್ನು ರಾಜ್ಯಕ್ಕೆ ತರಬಹುದಾಗಿತ್ತು. ಈ ಸರಕಾರ ಯಾರೊಬ್ಬರ ನೆರವಿಗೂ ಧಾವಿಸಿಲ್ಲ. ಕೇವಲ ದುಡ್ಡು ಹೊಡೆಯೋಕೆ ಕುಳಿತಿದ್ದಾರೆ ಎಂದು ಶಿವಕುಮಾರ್ ಟೀಕಿಸಿದರು.

ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಅರೆಸೇನಾ ಪಡೆಯನ್ನು ನಿಯೋಜಿಸಿರುವ ಸರಕಾರದ ಕ್ರಮಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ಬಹಳ ಸಂತೋಷವಾಗಿದೆ. ಇಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಏನು ಸಮಸ್ಯೆ ಇಲ್ಲ ಅನ್ನೋದು ಸರಕಾರ, ಅಭ್ಯರ್ಥಿ ಹಾಗೂ ಜನರಿಗೂ ಮನವರಿಕೆಯಾಗಿದೆ. ಆದರೆ, ಬಿಜೆಪಿ ಅಭ್ಯರ್ಥಿ ಏನು ಮಾಡುತ್ತೇವೆ ಅನ್ನೋದನ್ನ ತಿಳಿಸಿದ್ದಾರೆ. ಏನು ಮಾಡಬೇಕು, ಏನು ಮಾಡಿಸಬೇಕು ಅದು ಅವರ ಬಾಯಿಂದ ಬಂದಿದೆ. ಇಲ್ಲಿ ನಡೆಯುತ್ತಿರುವ ಅಧಿಕಾರ ದುರ್ಬಳಕೆ ಚುನಾವಣಾ ಆಯೋಗದ ಗಮನಕ್ಕೆ ಬಂದಿದೆ ಎಂದು ಅವರು ಹೇಳಿದರು.

ಸಂಸದ ಡಿ.ಕೆ.ಸುರೇಶ್ ಒಬ್ಬ ಜನಪ್ರತಿನಿಧಿಯಾಗಿ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಅವರು ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದರೆ ಪ್ರಕರಣ ದಾಖಲಿಸಿ, ಬಂಧಿಸಲಿ. ವಿನಾಕಾರಣ ಅವರ ವಿರುದ್ಧ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಶಿವಕುಮಾರ್ ಹೇಳಿದರು.

ಮೀರ್ ಸಾದಿಕ್ ಯಾರು ಅನ್ನೋದನ್ನು ಡಿಸಿಎಂ ಅಶ್ವತ್ಥ ನಾರಾಯಣ ಅವರೇ ಹೇಳಬೇಕು. ಬಿಜೆಪಿಯಲ್ಲೆ ಹಲವರು ಮೀರ್ ಸಾದಿಕ್ ಇದ್ದಾರೆ. ಅಶ್ವತ್ಥ ನಾರಾಯಣ ಮೀರ್ ಸಾದಿಕ್ ಅಲ್ವೇ? ಪಾಪ ಆಪರೇಷನ್ ಕಮಲ ಮಾಡಿದ್ದು ಯಾರೂ? ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡರಿಗೆ 5 ಕೋಟಿ ರೂ.ಕೊಟ್ಟಿದ್ದು ಯಾರು? ಇದೇ ಅಶ್ವಥ್ ನಾರಾಯಣ ಅಲ್ವೇ ಅವರ ಮನೆಗೆ ಹೋಗಿದ್ದು. ಸದನದಲ್ಲೇ ಶ್ರೀನಿವಾಸ ಗೌಡ ಇದನ್ನ ಹೇಳಿದ್ದರು. ನನಗೆ ಎಲ್ಲವೂ  ಗೊತ್ತಿದೆ, ಯಾರು ಮೀರ್ ಸಾದಿಕ್ ಅನ್ನೋದು ಎಂದು ಶಿವಕುಮಾರ್ ತಿರುಗೇಟು ನೀಡಿದರು.

ಆರ್.ಆರ್.ನಗರಕ್ಕೆ ಅರೆಸೇನಾ ಪಡೆಯನ್ನು ಕರೆಸುವ ಅವಶ್ಯಕತೆ ಇರಲಿಲ್ಲ. ಎಲ್ಲವೂ ಶಾಂತಯುತವಾಗಿಯೇ ನಡೆಯುತ್ತಿತ್ತು. ಕೊಲೆಮಾಡುವ ಬೆದರಿಕೆ ಕಾಂಗ್ರೆಸ್ ಮಾಡಲ್ಲ. ನಮ್ಮ ಸಂಸದರು ಸ್ವಲ್ಪ ಗಟ್ಟಿಯಾಗಿ ಕೇಳಿರಬಹುದು. ಅವರು ಕೇಳಿರೋದ್ರಲ್ಲಿ ತಪ್ಪೇನಿದೆ? ನಮ್ಮ ಮತಯಾಚನೆಗೆ ಅಡ್ಡಿಪಡಿಸಿದವರು ಯಾರು? ಬಿಜೆಪಿಯವರ ಬಗ್ಗೆ ಎಲ್ಲವೂ ಗೊತ್ತಿದೆ. ಅವರು ಏನೇ ಮಾಡಿದರೂ ಗೆಲ್ಲೋದು ನಾವೇ? ಎಂದು ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News