×
Ad

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

Update: 2020-10-23 21:26 IST

ಬೆಂಗಳೂರು, ಅ.23: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದಾಖಲಾಗಿದ್ದ ಅಕ್ರಮ ಡಿನೋಟಿಫಿಕೇಷನ್ ಆರೋಪ ಪ್ರಕರಣವನ್ನು ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿ ಆದೇಶಿಸಿದೆ. 

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದು ಕೋರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ನ್ಯಾಯಪೀಠ, ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿತು.

ಮೈಸೂರಿನ ವಿಜಯನಗರ 2ನೆ ಹಂತದ ಬಡಾವಣೆ ನಿರ್ಮಾಣಕ್ಕೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ(ಮುಡಾ) ಸ್ವಾಧೀನಪಡಿಸಿಕೊಂಡಿದ್ದ 535 ಎಕರೆ ಜಮೀನಿನಲ್ಲಿ 30 ಗುಂಟೆ ಜಮೀನು ಡಿನೋಟಿಫೈ ಮಾಡಲಾದ ಪ್ರಕರಣದಲ್ಲಿ ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆಂಬ ಆರೋಪ ಎದುರಿಸುತ್ತಿದ್ದಾರೆ. 1997ರ ಪ್ರಕರಣ ಇದಾಗಿದ್ದು, ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. ಡಿನೋಟಿಫೈ ಮಾಡಲಾದ 30 ಗುಂಟೆ ಜಮೀನಿನ ಪೈಕಿ 10 ಗುಂಟೆ ಖರೀದಿಸಿ ಸಿದ್ದರಾಮಯ್ಯ ಮನೆ ನಿರ್ಮಾಣ ಮಾಡಿ, ಬಳಿಕ ಆ ಮನೆ ಮಾರಾಟ ಮಾಡಿದ್ದರು. ಈ ರೀತಿ ನೋಟಿಫೈ ಮಾಡಿದ ಜಾಗವನ್ನು ಮಾರಾಟ ಮಾಡಿ ಸಿದ್ದರಾಮಯ್ಯ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಗಂಗರಾಜು ಎಂಬುವರು ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಿದ್ದರು.

ತನಿಖೆ ನಡೆಸಿದ್ದ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಆದರೆ ಇದನ್ನು ಪ್ರಶ್ನಿಸಿ ದೂರುದಾರ ಗಂಗರಾಜು ಕೋರ್ಟ್ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಬಿ ರಿಪೋರ್ಟ್ ರದ್ದುಗೊಳಿಸಿ, ವಿಚಾರಣೆಗೆ ಹಾಜರಾಗುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಿದ್ದರಾಮಯ್ಯನವರಿಗೆ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿತ್ತು. ಪ್ರಕರಣ ರದ್ದು ಕೋರಿ ಸಿದ್ದರಾಮಯ್ಯ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News