ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆಯೇ: ಕಾಂಗ್ರೆಸ್ ಪ್ರಶ್ನೆ

Update: 2020-10-23 15:58 GMT

ಬೆಂಗಳೂರು, ಅ. 23: ಆರ್.ಆರ್.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಉಪಚುನಾವಣೆ ಪ್ರಚಾರಕ್ಕೆ ಹೊರಗಿನವರು ಬರುತ್ತಿದ್ದಾರೆ. ಹೀಗಾಗಿ `ಕೇಂದ್ರ ಪಡೆ' ಕರೆಸಬೇಕು ಎಂದು ಹೇಳಿದ್ದಾರೆ. ಹಾಗಾದರೆ ರಾಜ್ಯ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆಯೇ? ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡರು, ಮುನಿರತ್ನ ಸೋಲಿನ ಭೀತಿಯಿಂದ ಮನಸೋ ಇಚ್ಛೆ ಹೇಳಿಕೆ ನೀಡುತ್ತಿದ್ದಾರೆ ಎಂದು ಇಂದಿಲ್ಲಿ ಟೀಕಿಸಿದ್ದಾರೆ.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ವಕ್ತಾರ ವಿ.ಎಸ್.ಉಗ್ರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಂಸದ ಧ್ರುವ ನಾರಾಯಣ್, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಪ್ರಿಯಾಂಕ್ ಖರ್ಗೆ ಜಂಟಿ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾತನಾಡಿದ ಉಗ್ರಪ್ಪ, ಚುನಾವಣಾ ಅಕ್ರಮದಲ್ಲಿ ಪಾಲ್ಗೊಂಡಿರುವ ಮುನಿರತ್ನ ವಿರುದ್ಧ ಚುನಾವಣಾ ಆಯೋಗ ಮತ್ತು ಕೋರ್ಟ್ ಸೂಚನೆ ನೀಡಿದರೂ, ಪೊಲೀಸರು ಎಫ್‍ಐಆರ್ ದಾಖಲು ಮಾಡುತ್ತಿಲ್ಲ ಎಂದು ದೂರಿದರು.

ದೇಶ ಮತ್ತು ರಾಜ್ಯದಲ್ಲಿ ಭ್ರಷ್ಟಾಚಾರದ ಗಂಗೋತ್ರಿ ಹರಿಯುತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಜನ ತಿರುಗಿಬಿದ್ದಿದ್ದು, ಉಪ ಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪರ ಅಲೆ ಇದ್ದು, ಎರಡೂ ಕ್ಷೇತ್ರಗಳಲ್ಲಿಯೂ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆಂದು ಭರವಸೆ ವ್ಯಕ್ತಪಡಿಸಿದ ಅವರು, ಮುನಿರತ್ನ ಅಪರೇಷನ್ ಕಮಲದ ಮೂಲಕ ತನ್ನನ್ನು ತಾನು ಮಾರಿಕೊಂಡಿದ್ದು, ಆಪರೇಷನ್ ಕಮಲದ ಹಣವನ್ನು ಚುನಾವಣಾ ಅಕ್ರಮಕ್ಕೆ ಬಳಕೆ ಮಾಡುತ್ತಿದ್ದಾರೆ. ಆಯೋಗದ ವೆಚ್ಚ 30 ಲಕ್ಷ ಮಾತ್ರ. ಆದರೆ, ಮುನಿರತ್ನ ಕೋಟ್ಯಾಂತರ ರೂ.ಅಕ್ರಮ ಹಣವನ್ನು ಸುರಿಯುತಿದ್ದಾರೆ ಎಂದು ದೂರಿದರು.

ನ್ಯಾಯಯುತ ಮತ ಕೇಳಲಿ: ಸುದ್ದಿಗೋಷ್ಠಿಯಲ್ಲಿ ಎಚ್.ಎಂ.ರೇವಣ್ಣ ಮಾತನಾಡಿ, ಬಿಬಿಎಂಪಿ ಗುತ್ತಿಗೆ ದಾಖಲಾತಿ ಹೊತ್ತೊಯ್ದ ಪ್ರಕರಣ ಸಂಬಂಧ ಮುನಿರತ್ನ ವಿರುದ್ಧ 1,800 ಕೇಸು ಹಾಕಿದ್ದಾರೆ. ಆದರೆ, ಮಾಜಿ ಸಂಸದ ಧ್ರುವ ನಾರಾಯಣ ಅವರ ಮೇಲೆ ವಿನಾಕಾರಣ ಹಲ್ಲೆಗೆ ಪ್ರಯತ್ನ ನಡೆಸಲಾಗಿದೆ. ನಾವು ಅನೇಕ ಚುನಾವಣೆಗಳನ್ನು ಎದುರಿಸಿದ್ದೇವೆ. ಆದರೆ, ಸೋಲಿನ ಭೀತಿಯಿಂದ ಪ್ರತಿಸ್ಪರ್ಧಿಗಳ ಮೇಲೆ ಹಲ್ಲೆಯತ್ನ ಸರಿಯಲ್ಲ ಎಂದು ಆಕ್ಷೇಪಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಯುತವಾಗಿ ಮತ ಕೇಳಬೇಕು. ಆದರೆ, ನಿಷ್ಪಕ್ಷಪಾತವಾಗಿ ಕಾನೂನು ರೀತಿಯಲ್ಲಿ ಕೆಲಸ ಮಾಡಬೇಕಾದ ಪೊಲೀಸರು ಸರಕಾರದ ಕೈಗೊಂಬೆಗಳಾಗಿದ್ದು, ಹಲ್ಲೆ ಕೃತ್ಯವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆಂದು ಟೀಕಿಸಿದ ಅವರು, ಮುನಿರತ್ನ ವಿರುದ್ಧ ಕೂಡಲೇ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ನಾವು ಅಧಿಕಾರಕ್ಕೆ ಬಂದರೆ ಮಾರಕ ಕೊರೋನ ವೈರಸ್ ಸೋಂಕಿಗೆ ಉಚಿತವಾಗಿ ಲಸಿಕೆ ನೀಡುತ್ತೇವೆ ಎಂದು ಬಿಜೆಪಿಯವರು ಭರವಸೆ ನೀಡುತ್ತಿದ್ದಾರೆ. ಆದರೆ, ಕೋವಿಡ್-19 ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಚುನಾವಣೆ ಗೆಲ್ಲಲು ಜನರಿಗೆ ಆಮಿಷವೊಡ್ಡುತ್ತಿದೆ

-ವಿ.ಎಸ್.ಉಗ್ರಪ್ಪ, ಕಾಂಗ್ರೆಸ್ ವಕ್ತಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News