‘ಡೊಲಾಂಡ್ ಟ್ರಂಪ್’ ಕಂಡ ಭಾರತ!

Update: 2020-10-24 06:40 GMT

ಪ್ರಧಾನಿ ಮೋದಿಯವರಿಂದಾಗಿ ವಿಶ್ವ ಭಾರತದೆಡೆಗೆ ನೋಡುತ್ತಿದೆ ಎನ್ನುವುದು ಮೋದಿ ಅಭಿಮಾನಿಗಳ ಬಳಿ ಉಳಿದುಕೊಂಡಿರುವ ಏಕೈಕ ಆಶಾವಾದ. ‘ಭಾರತದಲ್ಲಿ ಆರ್ಥಿಕತೆ ಸರ್ವನಾಶವಾಗಿದೆ, ನಿರುದ್ಯೋಗ ಹೆಚ್ಚಳವಾಗಿದೆ, ಜಿಡಿಪಿ ಕಡಿಮೆಯಾಗಿದೆ...’ ಹೀಗೆ ಒಂದೊಂದೇ ಆರೋಪಗಳನ್ನು ಮಾಡುತ್ತಿದ್ದಂತೆಯೇ ಪ್ರಧಾನಿಯನ್ನು ರಕ್ಷಿಸುವುದಕ್ಕಾಗಿ ‘ಆದರೂ, ಈಗ ವಿಶ್ವದ ಗಮನ ಭಾರತದ ಮೇಲಿದೆ’ ಎಂದು ಬಿಜೆಪಿಯ ನಾಯಕರು ತಿಪ್ಪೆ ಸಾರುತ್ತಿದ್ದಾರೆ. ಚೀನಾದ ಗಮನವಂತೂ ಭಾರತದ ಮೇಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಳೆದೆರಡು ತಿಂಗಳಿಂದ ಚೀನಾವು ಲಡಾಖ್‌ನಲ್ಲಿ ನಡೆಸುತ್ತಿರುವ ದಾಂಧಲೆಗಳನ್ನು ನೋಡಿದರೆ, ಬಹುಶಃ ‘ಮೋದಿಯಿಂದಾಗಿ ಅಭಿವೃದ್ಧಿಗೊಂಡಿರುವ ಭಾರತದ ಕುರಿತಂತೆ ಹೊಟ್ಟೆಕಿಚ್ಚಿನಿಂದ ಚೀನಾ ಗಡಿಯಲ್ಲಿ ತಕರಾರು ಮಾಡುತ್ತಿದೆ’ ಎಂದು ಸಮರ್ಥಿಸುವ ಮಟ್ಟಕ್ಕೆ ಬಿಜೆಪಿಯ ನಾಯಕರು ಇಳಿದಿದ್ದಾರೆ.

ಗಡಿಯಲ್ಲಿ ಭಾರತ ನಡೆಸುತ್ತಿರುವ ಕಾಮಗಾರಿಗಳು ಚೀನಾವನ್ನು ಬೆಚ್ಚಿ ಬೀಳಿಸಿದೆ ಎಂದು ಈಗಾಗಲೇ ಬಿಜೆಪಿಯ ನಾಯಕರೊಬ್ಬರು ಹೇಳಿಕೆಯನ್ನೂ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳೂ ಸೇರಿದಂತೆ ನಟರು, ರಾಜಕೀಯ ನಾಯಕರು ಇತರರನ್ನು ತನ್ನೆಡೆಗೆ ನೋಡುವಂತೆ ಮಾಡಲು ಋಣಾತ್ಮಕವಾದ ತಂತ್ರಗಳನ್ನು ಮಾಡುತ್ತಿದ್ದಾರೆ. ದ್ವೇಷ ಭಾಷಣಗಳ ಮೂಲಕ ಒಂದೇ ದಿನದಲ್ಲಿ ಈ ದೇಶದ ನಾಯಕರಾಗಿ ಮೂಡಿ ಬರಬಹುದು. ಹಾಗೆಯೇ, ವೀಕ್ಷಕರನ್ನು ಹೇಗಾದರೂ ಹಿಡಿದಿರಿಸಿಕೊಳ್ಳಲು ಟಿವಿ ಮಾಧ್ಯಮಗಳು ವದಂತಿಗಳನ್ನು, ಸುಳ್ಳು ಸುದ್ದಿಗಳನ್ನು ದಿನವಿಡೀ ಪ್ರಸಾರ ಮಾಡುವುದನ್ನು ನೋಡಿದ್ದೇವೆ. ಪರಿಣಾಮ ಏನೇ ಇರಲಿ, ಇತರರು ನಮ್ಮನ್ನು ಗಮನಿಸಬೇಕು ಎನ್ನುವುದಷ್ಟೇ ಅವರ ಅಂತಿಮ ಗುರಿ.

ಮೋದಿ ಈ ದೇಶದ ಪ್ರಧಾನಿಯಾದ ದಿನಗಳಲ್ಲಿ, ‘ಏನಾದರೂ ಹೊಸತನ್ನು ಮಾಡುತ್ತಾರೆ, ಭಾರತವನ್ನು ವಿಶ್ವ ಬೆರಗಾಗುವಂತೆ ಅಭಿವೃದ್ಧಿಗೊಳಿಸುತ್ತಾರೆ’ ಎಂದು ಬಹುತೇಕ ಜನರಲ್ಲಿ ನಿರೀಕ್ಷೆಗಳಿದ್ದದ್ದು ಸುಳ್ಳಲ್ಲ. ಅವರ ಆರಂಭದ ಭಾಷಣಗಳು, ‘ಅಚ್ಛೇ ದಿನ್ ಆನೇ ವಾಲೆ ಹೈ’ ಎಂಬ ಘೋಷಣೆ, ದೇಶದ ಜನರಲ್ಲಿ ಆತ್ಮವಿಶ್ವಾಸ ತುಂಬಿತ್ತು. ಆದರೆ ಎಲ್ಲ ನಿರೀಕ್ಷೆಗಳು ಅವರ ಆಡಳಿತದ ಮೊದಲ ಐದು ವರ್ಷಗಳಲ್ಲೇ ಠುಸ್ ಆದವು. ಹಾಗೆಂದು ವಿಶ್ವ ಈಗ ಭಾರತವನ್ನು ನೋಡುತ್ತಿಲ್ಲ ಎಂದೇನಿಲ್ಲ. ವಿಶ್ವ ಭಾರತವನ್ನು ಬೆಕ್ಕಸ ಬೆರಗಾಗಿ ನೋಡುತ್ತಿದೆ. ‘ಹೇಗಿದ್ದ ಭಾರತವನ್ನು ಎಂತಹ ಸ್ಥಿತಿಗೆ ತಲುಪಿಸಿ ಬಿಟ್ಟರು’ ಎನ್ನುವ ಆತಂಕ, ಕಳವಳ, ಖೇದದಿಂದ ವಿಶ್ವ ಭಾರತವನ್ನು ನೋಡುತ್ತಿದೆ. ಕನಿಷ್ಠ ನರೇಂದ್ರ ಮೋದಿಯ ಸ್ನೇಹಿತನಾಗಿರುವ ಟ್ರಂಪ್ ಆದರೂ ಭಾರತದ ಕುರಿತಂತೆ ಒಳ್ಳೆಯ ಮಾತುಗಳನ್ನು ಆಡುತ್ತಾರೆ ಎನ್ನುವ ಭರವಸೆಯೊಂದು ನಮಗಿತ್ತು. ಈಗ ನೋಡಿದರೆ, ನರೇಂದ್ರ ಮೋದಿಯವರ ಪ್ರೀತಿಯ ‘ಡೊಲಾಂಡ್ ಟ್ರಂಪ್’ ತಮ್ಮ ಮಾತಿನಲ್ಲಿ ಭಾರತವನ್ನು ‘ಕೊಳಕು ದೇಶ’ ಎಂದಿದ್ದಾರೆ.

ಬಹುಶಃ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದ ಸಂದರ್ಭದಲ್ಲಿ ಗುಜರಾತ್‌ನ ಬೀದಿಗಳ ಇಕ್ಕೆಡೆಗಳಲ್ಲಿ ಮೋದಿಯವರು ಗೋಡೆಯನ್ನು ಇನ್ನಷ್ಟು ಎತ್ತರವಾಗಿ ಕಟ್ಟಬೇಕಾಗಿತ್ತು. ಗುಜರಾತ್‌ನ ಕೊಳಕು ಟ್ರಂಪ್ ಕಣ್ಣಿಗೆ ಬಿದ್ದ ಕಾರಣಕ್ಕಾಗಿಯೇ ಇದೀಗ ಭಾರತವನ್ನು ‘ಕೊಳಕು ದೇಶ’ ಎಂದು ಕರೆದಿರಬೇಕು. ಇಷ್ಟಕ್ಕೂ ಈ ದೇಶವನ್ನು ಕೊಳಕು ದೇಶ ಎಂದು ಕರೆದದ್ದಕ್ಕಾಗಿ ನಾವು ‘ಟ್ರಂಪ್’ರನ್ನು ಟೀಕಿಸಬೇಕೋ ಅಥವಾ ಈ ದೇಶವನ್ನು ‘ಕೊಳಕು ದೇಶ’ವಾಗಿ ಪರಿವರ್ತಿಸಿದ್ದಕ್ಕಾಗಿ ನರೇಂದ್ರ ಮೋದಿಯವರನ್ನು ಟೀಕಿಸಬೇಕೋ ಎನ್ನುವುದರ ಬಗ್ಗೆಯೂ ನಾವು ಸ್ಪಷ್ಟವಾಗಿರಬೇಕು. ಯಾಕೆಂದರೆ, ನಮ್ಮದೇ ಮಾಧ್ಯಮಗಳಿಗೆ ದುಡ್ಡು ಸುರಿದು ಅವರ ಕೈಯಿಂದ ‘ಭೋ ಪರಾಕ್’ ಹಾಕಿಸುವುದರಿಂದ ಈ ದೇಶ ಅಭಿವೃದ್ಧಿಯಾಗುವುದಿಲ್ಲ ಅಥವಾ ಮಾಧ್ಯಮಗಳ ಮಾತುಗಳನ್ನು ನಂಬಿ ದೇಶವನ್ನು ವಿಶ್ವ ಹೊಗಳುವುದೂ ಇಲ್ಲ. ಹಾಗೆಯೇ ಇನ್ನೊಬ್ಬರಿಂದ ಬಲವಂತವಾಗಿ ಹೊಗಳಿಕೆಯನ್ನು ಪಡೆದುಕೊಳ್ಳುವುದು ಸರಿಯೂ ಅಲ್ಲ. ಟ್ರಂಪ್ ಹೇಳಿರುವುದು ಎಷ್ಟರಮಟ್ಟಿಗೆ ಸತ್ಯ? ಎನ್ನುವುದರ ಆಧಾರದ ಮೇಲೆ ನಾವು ಯಾವುದೇ ಟೀಕೆ, ವ್ಯಂಗ್ಯಗಳನ್ನು ಮಾಡಬೇಕು. ಟ್ರಂಪ್ ಹೇಳಿರುವುದನ್ನು ಮೋದಿಯವರು ಈ ಹಿಂದೆಯೇ ಒಪ್ಪಿಕೊಂಡಿದ್ದಾರೆ. ಆದುದರಿಂದಲೇ, ಟ್ರಂಪ್ ಆಗಮಿಸಿದಾಗ ಈ ದೇಶದ ಕೊಳಕನ್ನು ಮುಚ್ಚಿ ಹಾಕುವುದಕ್ಕಾಗಿ ಅಹ್ಮದಾಬಾದ್‌ನ ಇಕ್ಕೆಡೆಗಳಲ್ಲಿ ರಾತ್ರೋರಾತ್ರಿ ಗೋಡೆಗಳನ್ನು ನಿರ್ಮಿಸಿದ್ದರು. ಬರೇ ಗೋಡೆಗಳ ಮೂಲಕ ಮಾತ್ರವಲ್ಲ, ಮಾಧ್ಯಮಗಳ ಮೂಲಕವೂ ಈ ದೇಶದ ಸ್ಥಿತಿಗತಿಗಳನ್ನು ಮುಚ್ಚಿಹಾಕಲು ನಿರಂತರ ಪ್ರಯತ್ನವನ್ನು ನಡೆಸುತ್ತಲೇ ಬರುತ್ತಿದ್ದಾರೆ.

ನಮ್ಮ ದೇಶವನ್ನು ಟ್ರಂಪ್ ‘ಕೊಳಕು ದೇಶ’ ಎಂದು ಕರೆದಾಕ್ಷಣ ಮುಜುಗರ ಪಡುವ ನಾವು, ವಿಶ್ವಸಂಸ್ಥೆ ಈ ದೇಶದಲ್ಲಿ ಹೆಚ್ಚುತ್ತಿರುವ ಮಾನವ ಹಕ್ಕು ಉಲ್ಲಂಘನೆಗಳ ಕುರಿತಂತೆ ವ್ಯಕ್ತಪಡಿಸಿದ ಆತಂಕದ ಬಗ್ಗೆ ಮುಜುಗರ ಪಡದೇ ಇರುವುದು ವಿಪರ್ಯಾಸ. ‘ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಮಾನವ ಹಕ್ಕುಗಳು ಭಾರೀ ಒತ್ತಡಗಳಿಗೆ ಸಿಲುಕಿವೆ’ ಎಂದು ವಿಶ್ವಸಂಸ್ಥೆ ಭಾರತಕ್ಕೆ ಎಚ್ಚರಿಸಿದೆ. ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದಾಳಿಯ ಕುರಿತಂತೆ ಐರೋಪ್ಯ ಸಂಸತ್ ಸಮಿತಿಯೂ ಭಾರತಕ್ಕೆ ಎಚ್ಚರಿಕೆಯನ್ನು ನೀಡಿತ್ತು. ಟ್ರಂಪ್ ಎಲ್ಲೋ ತಮ್ಮ ಭಾಷಣದಲ್ಲಿ ‘ಭಾರತ ಕೊಳಕು’ ಎನ್ನುವುದಕ್ಕಿಂತಲೂ ಅವಮಾನಕಾರಿ ವಿಷಯವಿದು. ಇಂತಹ ಅಧಿಕೃತ ಕಳವಳಗಳು, ಆತಂಕಗಳು ಭಾರತದ ವರ್ಚಸ್ಸನ್ನು ವಿಶ್ವದಲ್ಲಿ ಕುಗ್ಗಿಸಿದೆ ಮಾತ್ರವಲ್ಲ, ಭಾರತದ ಆರ್ಥಿಕತೆಯ ಮೇಲೂ ಇದು ದುಷ್ಪರಿಣಾಮಗಳನ್ನು ಬೀರುತ್ತಿವೆೆ. ದೇಶದಲ್ಲಿ ಪ್ರಜಾಸತ್ತೆ ಗಟ್ಟಿಯಾಗಿದ್ದಾಗ, ಶಾಂತಿ ಸೌಹಾರ್ದ ನೆಲೆ ನಿಂತಾಗ ಮಾತ್ರ ಬಂಡವಾಳ ಹೂಡಲು ಉದ್ಯಮಿಗಳು ಮುಂದಾಗುತ್ತಾರೆ. ಹಿಂಸೆ, ದಂಗೆಗಳು, ಕ್ರಿಮಿನಲ್ ಚಟುವಟಿಕೆಗಳು ಹೆಚ್ಚುತ್ತಿರುವ ದೇಶದಲ್ಲಿ ಬಂಡವಾಳ ಹೂಡಲು ಯಾವ ದೇಶಗಳೂ ಮುಂದಾಗುವುದಿಲ್ಲ. ಇದೇ ಸಂದರ್ಭದಲ್ಲಿ ದೇಶ ಹಸಿವಿನ ಸೂಚ್ಯಂಕದಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿರುವುದು, ದೇಶದಲ್ಲಿ ಕ್ಷಯ ರೋಗಗಳು ಆತಂಕಕಾರಿ ಸ್ವರೂಪಕ್ಕೆ ಬದಲಾಗಿರುವುದು ಭಾರತದ ಪಾಲಿನ ಅವಮಾನಕಾರಿ ವಿಷಯವಾಗಬೇಕಾಗಿದೆ. ಭಾರತ ಈ ಸ್ಥಿತಿಗೆ ತಲುಪುವುದಕ್ಕೆ ಯಾರು ಕಾರಣ, ಏನು ಕಾರಣ ಎನ್ನುವ ಪ್ರಶ್ನೆಗಳಿಗೆ ಉತ್ತರಗಳನ್ನು ನಾವು ಆದಷ್ಟು ಬೇಗ ಕಂಡುಕೊಳ್ಳಬೇಕಾಗಿದೆ. ಇಲ್ಲವಾದರೆ ಭಾರತ ಮುಂದೊಂದು ದಿನ ವಿಶ್ವದ ಗುರುವಾಗುವ ಬದಲು ‘ಕುರು’ವಾಗಿ ವಿಶ್ವವನ್ನು ಕಾಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News