×
Ad

ಮೆಡಿಕಲ್ ಶಾಪ್‍ನಲ್ಲಿ ನಶೆಯೇರಿಸುವ ಮಾತ್ರೆಗಳು: ಇಬ್ಬರ ಬಂಧನ

Update: 2020-10-23 23:11 IST

ಮಡಿಕೇರಿ, ಅ.23: ಕೊಡಗು ಜಿಲ್ಲೆಯಲ್ಲಿ ನಶೆಯೇರುವ ಮಾತ್ರೆಗಳನ್ನು ಮೆಡಿಕಲ್ ಶಾಪ್ ಮಾಲಕರ ಶಾಮೀಲಿನೊಂದಿಗೆ ಮಾರಾಟ ಮಾಡುತ್ತಿದ್ದ ಯುವಕರಿಬ್ಬರನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಡಿಸಿಐಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. 

ಕೊಡಗು ಜಿಲ್ಲೆಯಲ್ಲಿ ಗಾಂಜಾ, ಡ್ರಗ್ಸ್ ಮತ್ತಿತರ ಮಾದಕ ವಸ್ತುಗಳ ಮಾರಾಟ ಹಾಗೂ ಬಳಕೆ ನಿಯಂತ್ರಣಕ್ಕೆ ಬಂದ ಹಿನ್ನಲೆಯಲ್ಲಿ ಮಾದಕ ವ್ಯಸನಿಗಳಾಗಿದ್ದ ಯುವಕರು ನಶೆಯೆರುವ ಮಾತ್ರೆಗಳನ್ನು ಮೆಡಿಕಲ್ ಶಾಪ್ ಗಳಿಂದ ಖರೀದಿಸಿ ಬಳಕೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. 

ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆ ಡಿಸಿಐಬಿ ಘಟಕದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಗೋಣಿಕೊಪ್ಪಲಿನ ಮೆಡಿಕಲ್ ಶಾಪ್ ವೊಂದರಿಂದ ನಶೆಯೇರುವ ಮಾತ್ರೆಗಳನ್ನು ಖರೀದಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು  ಮಾತ್ರೆಗಳ ಬಾಕ್ಸ್ ಸಹಿತ ಪತ್ತೆ ಹಚ್ಚಿದ್ದಾರೆ. 

ಗೋಣಿಕೊಪ್ಪದ ಹೆಚ್.ಆರ್.ಸುಮನ್ ಹಾಗೂ ಜೀವನ್ ಹೆಚ್.ಎಸ್ ಬಂಧಿತ ಆರೋಪಿಗಳಾಗಿದ್ದಾರೆ. ವಶಕ್ಕೆ ಪಡೆದ ಯುವಕರಿಬ್ಬರನ್ನು ಮಾತ್ರೆಗಳೊಂದಿಗೆ ಜಿಲ್ಲಾ ಡ್ರಗ್ ಕಂಟ್ರೋಲರ್ ಅಧಿಕಾರಿಯವರ ಮುಂದೆ ಹಾಜರುಪಡಿಸಲಾಗಿದೆ. 

ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಡಿಸಿಐಬಿ ಇನ್ಸ್ ಪೆಕ್ಟರ್ ಎನ್.ಕುಮಾರ್ ಆರಾಧ್ಯ, ಪಿಎಸ್‍ಐ  ಹೆಚ್.ವಿ ಚಂದ್ರಶೇಖರ್ ಸಿಬ್ಬಂದಿಗಳಾದ ಎಎಸ್‍ಐ ಹಮೀದ್, ಯೊಗೇಶ್ ಕುಮಾರ್, ನಿರಂಜನ್, ವಸಂತ, ಶರತ್ ರೈ, ವೆಂಕಟೇಶ್, ಸುರೇಶ್, ಅನಿಲ್ ಕುಮಾರ್ ಹಾಗೂ ಶಶಿಕುಮಾರ್ ರವರು ಭಾಗವಹಿಸಿದ್ದರು.

ಜಿಲ್ಲೆಯಲ್ಲಿರುವ ಕೆಲವು ಮೆಡಿಕಲ್ ಶಾಪ್ ನ ಮಾಲಕರು ನಶೆಯೆರುವ ಮಾತ್ರೆಗಳನ್ನು ಗೌಪ್ಯವಾಗಿ ಮಾದಕ ವ್ಯಸನಿಗಳಾಗಿರುವ ಕೆಲವು ಯುವಕರ ಮೂಲಕ ಮಾರಾಟ ಮಾಡಿಸಿ ಲಾಭ ಪಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

ನಶೆಯೇರುವ ಮಾತ್ರೆಗಳ ಬಳಕೆಯತ್ತ ಯುವಕರು ಮುಂದಾಗಿರುವ ಬಗ್ಗೆ ಮಾಹಿತಿಗಳು ಬರುತ್ತಿರುವುದರಿಂದ ಮೆಡಿಕಲ್ ಶಾಪ್ ಗಳ ಮಾಲಕರು ನಿಗಾವಹಿಸುವಂತೆ ತಿಳಿಸಿದ್ದಾರೆ. ಅಲ್ಲದೇ ಈ ಬಗ್ಗೆ ಪೋಷಕರು ಸಹಾ ತಮ್ಮ ಯುವ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾವಹಿಸಿ ಮಾದಕ ವ್ಯಸನಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸುವಂತೆ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News