×
Ad

ಕಲಬುರಗಿ ಕಾಳಜಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಸಂತ್ರಸ್ತರ ಯೋಗಕ್ಷೇಮ ವಿಚಾರಣೆ

Update: 2020-10-23 23:37 IST

ಕಲಬುರಗಿ, ಅ.23: ಕಲಬುರಗಿ ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಶುಕ್ರವಾರ ಜೇವರ್ಗಿ ತಾಲೂಕಿನ ನರಿಬೋಳ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು.

ಕಾಳಜಿ ಕೇಂದ್ರದಲ್ಲಿ ನೀಡಲಾಗುತ್ತಿರುವ ಊಟೋಪಚಾರ ಮತ್ತು ಮೂಲಭೂತ ಸೌಕರ್ಯ ಬಗ್ಗೆ ಸಂತ್ರಸ್ತರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಸಂತ್ರಸ್ತರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಭೀಮಾ ನದಿ ಪ್ರವಾಹ ತಗ್ಗಿದ್ದರಿಂದ ಮುಂದಿನ ದಿನದಲ್ಲಿ ಕಾಳಜಿ ಕೇಂದ್ರದಿಂದ ಮನೆಗೆ ಹೋಗುವ ನಿರಾಶ್ರಿತರು ಮೊದಲು ಮನೆಯ ಸುತ್ತಮುತ್ತ ಸ್ವಚ್ಛತೆಗೆ ಗಮನಹರಿಸಬೇಕು. ಗ್ರಾಮದಲ್ಲಿ ನೀರು ನಿಂತಿದಲ್ಲಿ ಅಥವಾ ಚರಂಡಿಗಳು ಮುಚ್ಚಿಹೋಗಿದಲ್ಲಿ ಪಿ.ಡಿ.ಓ. ಅವರ ಗಮನಕ್ಕೆ ತಂದಲ್ಲಿ ಸಮಸ್ಯೆ ಬಗೆಹರಿಸಲಾಗುವುದು. ಪ್ರವಾಹದಿಂದ ಸಾಂಕ್ರಾಮಿಕ ಸೋಂಕು ಬರುವ ಸಾಧ್ಯತೆವಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಈಗಾಗಲೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮನೆ ಸುತ್ತಮುತ್ತ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕು. ಕುಡಿಯುವ ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕು, ಸ್ಥಳೀಯ ಗ್ರಾಮ ಪಂಚಾಯತಿಯ ಸಿಬ್ಬಂದಿಗಳು ನಿಮಗೆ ಎಲ್ಲಾ ರೀತಿಯ ಸಹಕಾರ ನೀಡಲಿದ್ದಾರೆ ಎಂದು ಸಂತ್ರಸ್ತರಿಗೆ ಜಿಲ್ಲಾಧಿಕಾರಿ ತಿಳಿಸಿದರು.

ಕಾಳಜಿ ಕೇಂದ್ರದಲ್ಲಿ ಯಾರಿಗಾದರು ಕೋವಿಡ್ ಲಕ್ಷಣಗಳಿದ್ದಲ್ಲಿ ಕೇಂದ್ರಕ್ಕೆ ಭೇಟಿ ನೀಡುವ ವೈದ್ಯರಿಗೆ ತಿಳಿಸಿ ಅಗತ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಕಾಳಜಿ ಕೇಂದ್ರದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ತಹಶೀಲ್ದಾರ್ ಸಿದ್ದರಾಯ ಭೋಸಗಿ ಸೇರಿದಂತೆ ಸಂತ್ರಸ್ತರೊಂದಿಗೆ ಜಿಲ್ಲಾಧಿಕಾರಿ ಮಧ್ಯಾಹ್ನದ ಊಟ ಸವಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News