ಅಮೆರಿಕದಲ್ಲಿ ಉಚಿತ ಕೋವಿಡ್ ಲಸಿಕೆ : ಜೋ ಬೈಡನ್ ಭರವಸೆ

Update: 2020-10-24 04:09 GMT

ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದಲ್ಲಿ ಇಡೀ ದೇಶದ ಜನತೆಗೆ ಉಚಿತ ಕೋವಿಡ್-19 ಲಸಿಕೆ ನೀಡುವುದನ್ನು ಕಡ್ಡಾಯ ಮಾಡುವುದಾಗಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಆಶ್ವಾಸನೆ ನೀಡಿದ್ದಾರೆ.

ಈ ವೈರಸ್‌ನಿಂದ ಮುಕ್ತಿ ಪಡೆಯುವ ರಾಷ್ಟ್ರೀಯ ಕಾರ್ಯತಂತ್ರದ ಅಂಗವಾಗಿ ಸಾರ್ವತ್ರಿಕ ಉಚಿತ ಲಸಿಕೆ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ನಮಗೆ ಸುರಕ್ಷಿತ ಹಾಗೂ ಪರಿಣಾಮಕಾರಿ ಲಸಿಕೆ ಸಾಧ್ಯವಾದರೆ ವಿಮೆ ಸುರಕ್ಷೆ ಇರುವವರಿಗೆ ಹಾಗೂ ಇಲ್ಲದವರಿಗೆ ಹೀಗೆ ಪ್ರತಿಯೊಬ್ಬರಿಗೂ ಅದನ್ನು ಉಚಿತವಾಗಿ ನೀಡಲಾಗುವುದು" ಎಂದು ಹೇಳಿದ್ದಾರೆ. ಅಧ್ಯಕ್ಷೀಯ ಚುನಾವಣೆಗೆ ಕೇವಲ 11 ದಿನ ಬಾಕಿ ಇರುವಂತೆಯೇ ಜೋ ಬೈಡನ್ ಹೇಳಿಕೆ ಇಡೀ ದೇಶದಲ್ಲಿ ಸಂಚಲನ ಮೂಡಿಸಿದೆ.

ಸಮೀಕ್ಷೆಗಳ ಪ್ರಕಾರ ಅಧ್ಯಕ್ಷೀಯ ರೇಸ್‌ನಲ್ಲಿ ಹಿಂದಿರುವ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಉಚಿತ ಲಸಿಕೆಯ ಅಗತ್ಯತೆಯನ್ನು ತಮ್ಮ ಭಾಷಣದಲ್ಲಿ ಒತ್ತಿ ಹೇಳಿದ್ದರು. ಆದರೆ 2.23 ಲಕ್ಷ ಮಂದಿಯನ್ನು ಬಲಿ ತೆಗೆದುಕೊಂಡ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಟ್ರಂಪ್ ಆಡಳಿತ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಲಾಗಿತ್ತು.

"ಇತ್ತೀಚಿನ ದಿನಗಳಲ್ಲಿ ಕೋವಿಡ್-19ನಂಥ ಪರಿಸ್ಥಿತಿಯನ್ನು ನಾವು ಎದುರಿಸಿರಲಿಲ್ಲ. ಅದು ಕಡಿಮೆಯಾಗುವ ಲಕ್ಷಣವೇ ಕಾಣುತ್ತಿಲ್ಲ. ಪ್ರತಿ ರಾಜ್ಯದಲ್ಲೂ ವೈರಸ್ ಸೋಂಕು ಹೆಚ್ಚುತ್ತಿದೆ" ಎಂದು ಜೋ ಬೈಡನ್, ಡೆಲವೇರ್ ವಿಲ್ಮಿಂಗ್ಟನ್‌ನಲ್ಲಿ ನಡೆದ ಪ್ರಚಾರ ಭಾಷಣದಲ್ಲಿ ಹೇಳಿದರು. ಈ ವೈರಸ್ ಸೋಂಕು ಹರಡಿ ಎಂಟು ತಿಂಗಳು ಕಳೆದರೂ ಇದರ ನಿಯಂತ್ರಣಕ್ಕೆ ನಮ್ಮ ಅಧ್ಯಕ್ಷರ ಬಳಿ ಯಾವುದೇ ಕಾರ್ಯ ಯೋಜನೆ ಇಲ್ಲ ಎಂದು ಮಾಜಿ ಉಪಾಧ್ಯಕ್ಷರೂ ಆಗಿದ್ದ ಜೋ ಬೈಡನ್ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News